ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ತೀವ್ರ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ, ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆ ಇರುವುದರಿಂದ ನದಿಪಾತ್ರದ ಜನರಿಗೆ ಮುನ್ನೆಚ್ಚರಿಕೆ ಸೂಚನೆ ನೀಡಲಾಗಿದೆ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.
ಈ ಸಮಯದಲ್ಲಿ ಜಲಾಶಯಕ್ಕೆ 63,816 ಕ್ಯುಸೆಕ್ ನೀರು ಒಳಹರಿಯುತ್ತಿದ್ದು, ಸಂಗ್ರಹ ಸಾಮರ್ಥ್ಯ 105.788 ಟಿಎಂಸಿಯಾಗಿರುವ ಜಲಾಶಯದಲ್ಲಿ ಈಗಾಗಲೇ 61.889 ಟಿಎಂಸಿ ನೀರು ಸಂಗ್ರಹವಾಗಿದೆ. ತಜ್ಞರ ಸಲಹೆ ಮೇರೆಗೆ ಈ ವರ್ಷ ಜಲಾಶಯದಲ್ಲಿ ಕೇವಲ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಲು ನಿರ್ಧರಿಸಲಾಗಿದ್ದು, ಈ ಆಧಾರದ ಮೇಲೆ ಯಾವುದೇ ಕ್ಷಣ 0ರಿಂದ 25,000 ಕ್ಯುಸೆಕ್ ನೀರನ್ನು ನದಿಗೆ ಬಿಡಬಹುದು ಎಂದು ಎಚ್ಚರಿಸಲಾಗಿದೆ.
ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಜನರ ಜೊತೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣದ ಸ್ಥಳೀಯ ಆಡಳಿತಗಳಿಗೂ ತುಂಗಭದ್ರಾ ಮಂಡಳಿ ಎಚ್ಚರಿಕೆ ಸಂದೇಶ ರವಾನಿಸಿದೆ. ನದಿಯ ಕೆಳಭಾಗದ ಹಳ್ಳಿಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.
ತುಂಗಾ, ಭದ್ರಾ ಮತ್ತು ವರದಾ ನದಿಗಳಲ್ಲಿ ಹರಿವು ಹೆಚ್ಚಾಗಿರುವುದರಿಂದ ಹಾಗೂ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ, ಜಲಾಶಯದ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಇದೀಗ 19ನೇ ಕ್ರಸ್ಟ್ ಗೇಟ್‌ಗೆ ಅಳವಡಿಸಲಾದ ಸ್ಟಾಪ್ ಲಾಗ್ ಹಾಗೂ ಬರುವ ದಿನಗಳಲ್ಲಿ ನಡೆಯಲಿರುವ ಗೇಟ್ ನವಿಕರಣ ಕಾರ್ಯಗಳಿಗೆ ಒಳ ಹರಿವು ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ, ನಿರ್ವಹಣಾ ಕಾರ್ಯಕ್ಕೂ ಅನೇಕ ಸವಾಲುಗಳು ಎದುರಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.