ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಉಂಟಾಗಿ ಮೂವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಇದೀಗ ಘಟನೆಗೆ ಕ್ಷಮೆಯಾಚಿಸಿರುವ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ, ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಘೋಷಣೆ ಮಾಡಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಅವರು, ನಾನು ಮತ್ತು ನನ್ನ ಸರ್ಕಾರ ಎಲ್ಲಾ ಜಗನ್ನಾಥ ಭಕ್ತರರಲ್ಲಿ ಕ್ಷಮೆಯಾಚಿಸುತ್ತದೆ. ಜೀವ ಕಳೆದುಕೊಂಡ ಭಕ್ತರ ಕುಟುಂಬಗಳಿಗೆ ನಾವು ನಮ್ಮ ಸಂತಾಪ ಸೂಚಿಸುತ್ತೇವೆ. ಈ ಆಳವಾದ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಅವರಿಗೆ ನೀಡಬೇಕೆಂದು ಮಹಾಪ್ರಭು ಜಗನ್ನಾಥನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ದುರಂತದಲ್ಲಿ ಪ್ರಾಣ ಕಳೆದುಕೊಂಡ ಭಕ್ತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೇ ಈ ಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರದವು ನಿಮ್ಮೊಂದಿಗಿರಲಿದೆ ಎಂದು ಭರವಸೆ ನೀಡಿದ್ದಾರೆ.
ಇನ್ನೂ ಘಟನೆಗೆ ನಿಖರ ಕಾರಣ ತಿಳಿಯಲು ಪೂರ್ಣ ಪ್ರಮಾಣದ ಆಡಳಿತಾತ್ಮಕ ತನಿಖೆಗೆ ಮಾಝಿ ಆದೇಶಿಸಿದ್ದಾರೆ. ಈ ಬೆನ್ನಲ್ಲೇ ಭದ್ರತಾ ಲೋಪಕ್ಕೆ ಕಾರಳವಾದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದಾಗಿ ವರದಿಗಳು ತಿಳಿಸಿವೆ.
ಜೂ.27ರಂದು ಜಗನ್ನಾಥ ದೇವಾಲಯದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಗುಂಡಿಚಾ ದೇವಾಲಯದ ಬಳಿ ಕಾಲ್ತುಳಿತ ಉಂಟಾಗಿತ್ತು. ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಪ್ರಭಾತಿ ದಾಸ್, ಬಸಂತಿ ಸಾಹು ಹಾಗೂ ಪ್ರೇಮಕಾಂತ್ ಮೊಹಂತಿ (70) ಎಂದು ಗುರುತಿಸಲಾಗಿದೆ. ಮೂವರೂ ಒಡಿಶಾದ ಖುರ್ದಾ ಜಿಲ್ಲೆಯವರಾಗಿದ್ದು, ರಥಯಾತ್ರೆಗಾಗಿ ಪುರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.