ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರು ಭಾನುವಾರ ಕುಟುಂಬ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಆಶ್ಲೇಷ ಬಲಿ ಸೇವೆ ನೆರವೇರಿಸಿದರು.
ಬಳಿಕ ಅವರು ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.ಶ್ರೀಗಳು ಅವರಿಗೆ ಶಾಲು ಹೊದಿಸಿ ಫಲ ಮಂತ್ರಾಕ್ಷತೆ ನೀಡಿ ಹರಸಿದರು.
ಸರ್ವರ ಒಳಿತಿಗೆ ಪ್ರಾರ್ಥನೆ
ನಾನು ಕಳೆದ ಹತ್ತು ಹದಿನೈದು ವರ್ಷಗಳಿಂದ ಕುಕ್ಕೆ ಕ್ಷೇತ್ರಕ್ಕೆ ಬರುತ್ತಿದ್ದೇನೆ. ಇದರಿಂದ ನನಗೆ ನೆಮ್ಮದಿ ಪ್ರಾಪ್ತವಾಗಿದೆ. ಸ್ವಾಮೀಜಿಗಳೊಂದಿಗೆ ಮಾತನಾಡಿ ಅವರ ಆಶೀರ್ವಾದ ಪಡೆದಿದ್ದೇನೆ. ತಮಿಳುನಾಡಿನ ಜನ, ಕರ್ನಾಟಕದ ಜನ ಹಾಗೂ ಇಡೀ ಭಾರತದ ಜನರು ಸುಖ ಶಾಂತಿ ನೆಮ್ಮದಿಯಾಗಿ ಇರಬೇಕು ಎಂದು ಆಶ್ಲೇಷ ನಕ್ಷತ್ರದ ಈ ಪುಣ್ಯದಿನ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಎಲ್ಲಾ ಜನರಿಗೂ ಒಳ್ಳೆದಾಗಬೇಕು ಎಂದು ಪ್ರಾರ್ಥಿಸಿದ್ದೇನೆ ಎಂದು ಅಣ್ಣಾಮಲೈ ನುಡಿದರು.