ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಇ-ಮೇಲ್ ಮೂಲಕ ಬಾಂಬ್ ಸ್ಫೋಟದ ಬೆದರಿಕೆ ಬಂದಿದ್ದು, ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಾಗಿದೆ. ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ಶ್ರೀಪಾದ್ ಅವರ ಅಧಿಕೃತ ಇ-ಮೇಲ್ ಖಾತೆಗೆ ‘roadkill kyo’ ಎಂಬ ಅಜ್ಞಾತ ಐಡಿಯಿಂದ ಬಂದ ಸಂದೇಶದಲ್ಲಿ ಸ್ಫೋಟ ಎಚ್ಚರಿಕೆ ನೀಡಲಾಗಿತ್ತು.
ಬೆದರಿಕೆಯ ನಂತರ, ಬಾಂಬ್ ನಿಷ್ಕ್ರಿಯ ದಳ (BDDS), ಶ್ವಾನ ದಳ, ಆಂತರಿಕ ಭದ್ರತಾ ಸಿಬ್ಬಂದಿ ಹಾಗೂ ಗುಪ್ತಚರ ಇಲಾಖೆ ಸೇರಿದಂತೆ ಹಲವು ತನಿಖಾ ತಂಡಗಳು ವಿಮಾನ ನಿಲ್ದಾಣದ ಒಳಗೆ ಮತ್ತು ಹೊರಗೆ ಸಂಪೂರ್ಣ ತಪಾಸಣೆ ನಡೆಸಿದವು. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಪ್ರವೇಶ ದ್ವಾರಗಳಲ್ಲಿ ತೀವ್ರ ತಪಾಸಣೆ ಜಾರಿಗೊಳಿಸಲಾಯಿತು.
ಬಾಂಬ್ ತಪಾಸಣಾ ತಂಡ ಸಂಪೂರ್ಣ ವಿಮಾನ ನಿಲ್ದಾಣವನ್ನು ಪರಿಶೀಲಿಸಿದರೂ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಅಧಿಕಾರಿಗಳು ಈ ಇ-ಮೇಲ್ ಬೆದರಿಕೆಯನ್ನು ತಾತ್ಕಾಲಿಕವಾಗಿ ಕಿಡಿಗೇಡಿಗಳ ಕೃತ್ಯವೆಂದು ಶಂಕಿಸುತ್ತಿದ್ದಾರೆ. ಈ ಬೆದರಿಕೆಯಿಂದಾಗಿ ಯಾವುದೇ ವಿಮಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗದಿದ್ದರೂ, ಪ್ರಯಾಣಿಕರಿಗೆ ತಪಾಸಣೆಯ ಅವಧಿಯಲ್ಲಿ ಸ್ವಲ್ಪ ಅನಾನುಕೂಲತೆ ಎದುರಾದದ್ದು ಗಮನಾರ್ಹ.
ಇತರ ವಿಮಾನ ನಿಲ್ದಾಣಗಳಿಗೂ ಬೆದರಿಕೆ ಸಂದೇಶ
ಹುಬ್ಬಳ್ಳಿಯೊಂದಿಗೆ, ಬೆಂಗಳೂರು, ಬೆಳಗಾವಿ ಹಾಗೂ ಕಲಬುರಗಿ ವಿಮಾನ ನಿಲ್ದಾಣಗಳಿಗೂ ಇದೇ ಇ-ಮೇಲ್ ಐಡಿಯಿಂದ ಬಾಂಬ್ ಬೆದರಿಕೆ ಸಂದೇಶಗಳು ಬಂದಿರುವುದು ದೃಢಪಟ್ಟಿದೆ. ಮಾಹಿತಿ ಪ್ರಕಾರ, ಒಟ್ಟು 41 ವಿಮಾನ ನಿಲ್ದಾಣಗಳಿಗೆ ಇಂತಹ ಸಂದೇಶಗಳನ್ನು ಕಳುಹಿಸಲಾಗಿದೆ. ಇದು ದೇಶವ್ಯಾಪಿ ಸೈಬರ್ ಕಿಡಿಗೇಡಿಗಳ ಸಂಚು ಎಂಬ ಶಂಕೆಗೂ ಕಾರಣವಾಗಿದೆ.
ಈ ಕುರಿತು ಹುಬ್ಬಳ್ಳಿಯ ಗೋಕುಲ್ ರಸ್ತೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ಸೈಬರ್ ಕ್ರೈಂ ವಿಭಾಗದ ಸಹಾಯದಿಂದ ತನಿಖೆ ಆರಂಭಿಸಲಾಗಿದೆ. ಇ-ಮೇಲ್‌ನ ಮೂಲವನ್ನು ಪತ್ತೆ ಹಚ್ಚಲು ಕೇಂದ್ರ ಗುಪ್ತಚರ ಸಂಸ್ಥೆಗಳ ಸಹಕಾರವೂ ಪಡೆಯಲಾಗಿದೆ.