ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಶಿಮ್ಲಾದಲ್ಲಿ 5 ಅಂತಸ್ತಿನ ಕಟ್ಟಡ ಕುಸಿದಿದೆ. ಮನೆ ಇಸ್ಪೀಟೆಲೆಗಳಂತೆ ಕುಸಿದು ಬೀಳುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ.
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಮತ್ತು ಹಠಾತ್ ಪ್ರವಾಹದ ನಂತರ ನಾಪತ್ತೆಯಾಗಿರುವ ಆರು ಜನರ ಶೋಧ ಕಾರ್ಯಾಚರಣೆಯನ್ನು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು, ಪೊಲೀಸ್ ಮತ್ತು ಗೃಹ ರಕ್ಷಕರ ಜಂಟಿ ತಂಡಗಳು ಪ್ರಾರಂಭಿಸಿವೆ.
12 ಜಿಲ್ಲೆಗಳ ಪೈಕಿ ಶಿಮ್ಲಾ, ಬಿಲಾಸ್‌ಪುರ್, ಹಮೀರ್‌ಪುರ್, ಕಂಗ್ರಾ, ಮಂಡಿ, ಸೋಲನ್, ಸಿರ್ಮೌರ್, ಉನಾ, ಕುಲು ಮತ್ತು ಚಂಬಾಗಳಿಗೆ ಎಚ್ಚರಿಕೆ ನೀಡಲಾಗಿದೆ. ಸೋಲನ್‌ನ ಕೋಟಿ ಪ್ರದೇಶದ ಬಳಿ ಭಾನುವಾರ ಭಾರೀ ಮಳೆಯ ನಂತರ ಬಂಡೆಗಳು ಮತ್ತು ಮರಗಳು ಹಳಿಯ ಮೇಲೆ ಬಿದ್ದ ಕಾರಣ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಶಿಮ್ಲಾ-ಕಲ್ಕಾ ರೈಲು ಮಾರ್ಗದಲ್ಲಿ ರೈಲು ಸೇವೆಯೂ ಅಸ್ತವ್ಯಸ್ತವಾಯಿತು. ಹವಾಮಾನ ಇಲಾಖೆ “ರೆಡ್” ಅಲರ್ಟ್ ಘೋಷಿಸಿದೆ.
ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ 129 ರಸ್ತೆಗಳು ಮುಚ್ಚಲ್ಪಟ್ಟಿವೆ. ಸಿರ್ಮೌರ್ ಮತ್ತು ಮಂಡಿ ಜಿಲ್ಲೆಗಳಿಂದ ಕ್ರಮವಾಗಿ 57 ಮತ್ತು 44 ರಸ್ತೆಗಳು ಸಂಪರ್ಕ ಕಡಿತಗೊಂಡಿವೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಕಾಂಗ್ರಾ, ಮಂಡಿ, ಸಿರ್ಮೌರ್ ಮತ್ತು ಸೋಲನ್ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೋಮವಾರ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ.
ಹಿಮಾಚಲ ಪ್ರದೇಶದ ಕಂಗ್ರಾ ಮತ್ತು ಕುಲು ಜಿಲ್ಲೆಗಳಲ್ಲಿ ಬುಧವಾರ ಸಂಭವಿಸಿದ ಮೇಘಸ್ಫೋಟ ಮತ್ತು ಹಠಾತ್ ಪ್ರವಾಹದ ನಂತರ ಆರು ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಕಾಂಗ್ರಾ ಜಿಲ್ಲೆಯ ಜಲವಿದ್ಯುತ್ ಯೋಜನೆ ಸ್ಥಳದಿಂದ ಇಲ್ಲಿಯವರೆಗೆ ಐದು ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಇತರ ಮೂವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.