ಹೊಸ ದಿಗಂತ ವರದಿ,ಮಂಗಳೂರು:
ಹಾಸನ ಜಿಲ್ಲೆಯಲ್ಲಿ ಸರಣಿ ಹೃದಯಘಾತ ಪ್ರಕರಣ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯಿಂದ ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಾಸನದಲ್ಲೇ ಯಾಕಿಷ್ಟು ಹೃದಯಘಾತ ಆಗುತ್ತಿದೆ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸತ್ಯಾ ಸತ್ಯತೆ ಏನು ಎನ್ನುವುದು ಅಂಕಿ ಅಂಶಗಳ ಆಧಾರದ ವರದಿ ಮೂಲಕ ತಿಳಿಯುತ್ತದೆ. ವರದಿ ನೋಡಿ ಮಾಹಿತಿ ನೀಡುತ್ತೇವೆ ಎಂದರು.
ಈಗಿನ ಜೀವನ ಶೈಲಿ, ಆಹಾರ ಪದ್ದತಿ, ಮೊಬೈಲ್ ಮತ್ತು ಡಿಜಿಟಲ್ ವ್ಯಸನದಿಂದ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ.
ಅನೇಕ ಜನರಿಗೆ ಚಿಕ್ಕ ವಯಸ್ಸಿನಲ್ಲಿ ರಕ್ತದೋತ್ತಡ, ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈಗ ಎಲ್ಲ ಕಡೆ ಮಾಲಿನ್ಯವಿದೆ. ದೆಹಲಿಯ ಗಾಳಿಯನ್ನು ಉಸಿರಾಟ ಮಾಡಿದರೆ ದುಷ್ಪರಿಣಾಮ ವಾಗುತ್ತದೆ. ಜೀವನ ಶೈಲಿ ನೋಡಿಕೊಳ್ಳುವುದು ಅತೀ ಮುಖ್ಯವಾಗಿದೆ ಎಂದು ಹೇಳಿದರು.
ಕೋವಿಡ್ ಬಳಿಕ ಹೃದಯಘಾತ ಏರಿಕೆ ಕುರಿತು ಪರಿಶೀಲನೆ ಮಾಡಲಾಗುತ್ತಿದೆ. ಕೋವಿಡ್ ನಿಂದ ಏನಾದರೂ ಸಮಸ್ಯೆಗಳು ಇದಿಯೇ ಎಂದು ಮುಖ್ಯಮಂತ್ರಿಗಳು ಸರಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಇದು ಕೇವಲ ಕರ್ನಾಟಕದ ಸಮಸ್ಯೆ ಅಲ್ಲ. ವಿಶ್ವಮಟ್ಟದ ಅಧ್ಯಯನದ ಅವಶ್ಯಕತೆಯಿದೆ . ಲಾಂಗ್ ಕೋವಿಡ್ ದುಷ್ಪರಿಣಾಮ ಏನು ಎನ್ನುವುದರ ಅಧ್ಯಯನ ನಡೆಯಬೇಕು. ಬಹಳಷ್ಟು ಸಂಶೋಧನೆಯಾಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.