ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ಫೋಸಿಸ್ ನಾರಾಯಣ ಮೂರ್ತಿ ನೀಡಿದ್ದ ವಾರದಲ್ಲಿ 70 ಗಂಟೆ ಕೆಲಸದ ಸಲಹೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಬಹುತೇಕರು ವಿರೋಧ ವ್ಯಕ್ತಪಡಿಸಿದ್ದರು, ಕೆಲವರು ಬೆಂಬಲಿಸಿದ್ದರು.
ಇದೀಗ ಈ ಹೇಳಿಕೆ ಹಾಗೂ ಚರ್ಚೆ ತಣ್ಣಗಾಗುತ್ತಿದ್ದಂತೆ ಇನ್ಫೋಸಿಸ್ ಕಂಪನಿ ತನ್ನ ಉದ್ಯೋಗಿಗಳಿಗೆ ಕಳುಹಿಸಿದ ಸಂದೇಶ ಇದೀಗ ಮತ್ತೆ ಚರ್ಚೆಗೆ ಕಾರಣವಾಗಿದೆ.
ಇನ್ಫೋಸಿಸ್ ಕಂಪನಿ ಇದೀಗ ತನ್ನ ಎಲ್ಲಾ ಉದ್ಯೋಗಿಗಳಿಗೆ ವರ್ಕ್ ಲೈಫ್ ಬ್ಯಾಲೆನ್ಸ್ ಕುರಿತು ಇಮೇಲ್ ಕಳುಹಿಸಿದೆ. ಪ್ರತಿಯೊಬ್ಬ ಉದ್ಯೋಗಿ ಕೆಲಸದ ಸಮಯದ ಕುರಿತು ಗಮನವಿರಲಿ. ಸೋಮವಾರದಿದಂ ಶುಕ್ರವಾರದ ವರೆಗೆ ವಾರದಲ್ಲಿ 5 ದಿನ ಕೆಲಸ. ಪ್ರತಿ ದಿನ 9.15 ಗಂಟೆ ಕೆಲಸ. ಇದಕ್ಕಿಂತ ಹೆಚ್ಚು ಮಾಡುವಂತಿಲ್ಲ. ಒತ್ತಡ, ಹೆಚ್ಚು ಅವಧಿ ಕೆಲಸಗಳಿಂದ ಗಂಭೀರವಾದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬ ಉದ್ಯೋಗಿಗಳು ನಿಗಧಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸಬೇಕು. ಹಾಗೂ ಅವಧಿಗಿಂತ ಹೆಚ್ಚಿನ ಸಮಯ ಕೆಲಸ ಮಾಡಬಾರದು ಎಂದು ಇನ್ಫೋಸಿಸ್ ಇಮೇಲ್ ಮೂಲಕ ಉದ್ಯೋಗಿಗಳಿಗೆ ಸಂದೇಶ ರವಾನಿಸಿದೆ.
ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು ಕೆಲಸದ ಅವಧಿಯಲ್ಲಿ ಜವಾಬ್ದಾರಿಗಳನ್ನು ಮುಗಿಸಬೇಕು. ಓವರ್ ಟೈಮ್ ಕೆಲಸ ಅಪಾಯಕ್ಕೆ ಅಹ್ವಾನ ನೀಡಿದಂತೆ ಎಂದು ಇನ್ಫೋಸಿಸ್ ಇಮೇಲ್‌ನಲ್ಲಿ ಹೇಳಿದೆ. ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳ ಕೆಲಸದ ಸಮಯದ ಕುರಿತು ಹೆಚ್ಆರ್ ಗಮನವಹಿಸಲಿದ್ದಾರೆ. ಓವರ್ ಟೈಮ್ ಡ್ಯೂಟಿಗೆ ಆಸ್ಪದ ನೀಡದಂತೆ ಸೂಚಿಸಲಾಗಿದೆ ಎಂದು ಇಮೇಲ್‌ನಲ್ಲಿ ಹೇಳಿದೆ.
ಉದ್ಯೋಗಿಗಳ ಕೆಲಸ ಹಾಗೂ ಬದ್ಧತೆ ಬಗ್ಗೆ ಗೌರವವಿದೆ. ಇದೇ ವೇಳೆ ಆರೋಗ್ಯಕರ ವರ್ಕ್ ಲೈಫ್ ಬ್ಯಾಲೆನ್ಸ್ ಮಾಡುವ ಅವಶ್ಯಕತೆ ಇದೆ. ಆರೋಗ್ಯಕರ ವರ್ಕ್ ಲೈಫ್ ಬ್ಯಾಲೆನ್ಸ ನಿಮ್ಮ ಆರೋಗ್ಯ ಹಾಗೂ ಸುದೀರ್ಘ ಸೇವೆಗೂ ನೆರವಾಗಲಿದೆ. ನಿಮ್ಮ ಕೆಲಸದ ಒತ್ತಡ, ಡೆಡ್‌ಲೈನ್, ಟಾರ್ಗೆಟ್ ಕಾರಣದಿಂದ ಹೆಚ್ಚಿನ ಸಮಯ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆದರೆ ಕೆಲಸದ ವೇಳಾಪಟ್ಟಿ, ಡೆಡ್‌ಲೈನ್‌ನಲ್ಲಿ ಕೆಲಸ ಮುಗಿಸುವ ಕೌಶಲ್ಯ, ಸಮಯ ಹೊಂದಿಸುವಿಕೆ ಮಾಡಿಕೊಳ್ಳಿ. ಇದರೊಂದಿಗೆ ತಕ್ಕ ಸಮಯದಲ್ಲಿ ಕೆಲಸ ಮುಗಿಸಲು ಹಾಗೂ ನಿಮ್ಮ ಸಂತೋಷದ ಜೀವನಕ್ಕೂ ಸಹಕಾರಿಯಾಗಲಿದೆ ಎಂದು ಇನ್ಫೋಸಿಸ್ ಇಮೇಲ್ ಮೂಲಕ ಹೇಳಿದೆ.
ಹೆಚ್ಚಿನ ಸಮಯ ಕುಳಿತುಕೊಂಡು ಕೆಲಸ ಮಾಡಬೇಡಿ. ಕೆಲಸದ ನಡುವೆ ಸಣ್ಣ ಸಣ್ಣ ಬ್ರೇಕ್ ತೆಗೆದುಕೊಳ್ಳಿ. ಯಾವುದೇ ಕ್ಷಣದಲ್ಲಿ ನೆರವು ಅಥವಾ ಸಲಹೆ ಬೇಕಿದ್ದ ಮ್ಯಾನೇಜರ್ ಅಥವಾ ಹೆಚ್ಆರ್ ಸಂಪರ್ಕಿಸಿ. ಆರೋಗ್ಯಕರ ವಾತಾವರಣದಲ್ಲಿ ಕೆಲಸ ಮಾಡಿ ಎಂದು ಇನ್ಫೋಸಿಸ್ ಹೆಚ್ಆರ್ ಪ್ರತಿ ಉದ್ಯೋಗಿಗಳಿಗೆ ಇಮೇಲ್ ಸಂದೇಶ ರವಾನಿಸಿದ್ದಾರೆ.