ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ್ದ ಕಾಲ್ತುಳಿತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕಾರಣ ಎಂದು ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಹೇಳಿದೆ.
ಪೊಲೀಸರಿಗೆ ತಿಳಿಸದೆ ಅಥವಾ ಅಗತ್ಯ ಅನುಮತಿ ಪಡೆಯದೆ ಆರ್‌ಸಿಬಿ ಸಾಮಾಜಿಕ ಮಾಧ್ಯಮದಲ್ಲಿ ವಿಜಯೋತ್ಸವದ ಮೆರವಣಿಗೆಯನ್ನು ಘೋಷಿಸಿದೆ ಎಂದು ನ್ಯಾಯಮಂಡಳಿ ತನ್ನ ಆದೇಶದಲ್ಲಿ ಹೇಳಿದೆ.
ಜೂನ್ 4 ರಂದು ಆರ್‌ಸಿಬಿ 18 ವರ್ಷಗಳ ನಂತರ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ಸಂಭವಿಸಿತ್ತು.ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ 11 ಮಂದಿ ಸಾವನ್ನಪ್ಪಿ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಆರ್‌ಸಿಬಿ ಮ್ಯಾನೇಜ್‌ಮೆಂಟ್ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಷ್ಟು ಪ್ರಮಾಣದ ಜನರು ಒಂದೆಡೆಗೆ ಸೇರಿದ್ದರು. ಸಮಯದ ಕೊರತೆಯಿಂದಾಗಿ, ಪೊಲೀಸರಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿಧಾನಸೌಧದಲ್ಲಿ ನಡೆದ ಮತ್ತೊಂದು ಸರ್ಕಾರಿ ಕಾರ್ಯಕ್ರಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದರಿಂದಾಗಿ ಜನರ ಕೊರತೆ ಉಂಟಾಯಿತು. ಸೂಚನೆಯ ಕೊರತೆಯಿಂದಾಗಿ, ಇಷ್ಟು ದೊಡ್ಡ ಜನಸಂದಣಿಯನ್ನು ನಿರ್ವಹಿಸಲು ಪೊಲೀಸರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ನ್ಯಾಯಮಂಡಳಿ ಹೇಳಿದೆ.
ಪೊಲೀಸ್ ಸಿಬ್ಬಂದಿ ಕೂಡ ಮನುಷ್ಯರೇ. ಅವರು ‘ದೇವರು’ (ಭಗವಾನ್) ಅಲ್ಲ ಅಥವಾ ಮಾಂತ್ರಿಕನೂ ಅಲ್ಲ ಮತ್ತು ಕೇವಲ ಬೆರಳನ್ನು ಉಜ್ಜುವ ಮೂಲಕ ಯಾವುದೇ ಆಸೆಯನ್ನು ಪೂರೈಸುವ ‘ಅಲ್ಲಾದ್ದೀನ್ ಕಾ ಚಿರಾಗ್’ ನಂತಹ ಮಾಂತ್ರಿಕ ಶಕ್ತಿಗಳನ್ನು ಹೊಂದಿಲ್ಲ ಎಂದು ನ್ಯಾಯಮಂಡಳಿ ತಿಳಿಸಿದೆ.
ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ನೋಟಿಸ್ ನೀಡಬೇಕು. ಇದಕ್ಕೆ ಸಮಯ ಬೇಕಾಗುತ್ತದೆ. ಆರ್‌ಸಿಬಿ ಇದರ ಅರಿವಿಲ್ಲದೆ ಕಾರ್ಯಕ್ರಮ ಯೋಜಿಸಿದೆ. ಇಂತಹ ಪರಿಸ್ಥಿತಿಯನ್ನು ಸೃಷ್ಟಿಸಿದ್ದಕ್ಕೆ ಆರ್‌ಸಿಬಿಯನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ.