ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ಪಾಶಮೈಲಾರಂನಲ್ಲಿರುವ ಫಾರ್ಮಾ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ಪಾವತಿಸುವುದನ್ನು ಖಚಿತಪಡಿಸಿಕೊಳ್ಳಲು ತೆಲಂಗಾಣ ಸರ್ಕಾರ ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್‌ನ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಲಿದೆ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ತಿಳಿಸಿದ್ದಾರೆ.
ಸ್ಫೋಟ ನಡೆದ ಸ್ಥಳಕ್ಕೆ ಇಂದು ಭೇಟಿ ನೀಡಿದ ಅವರು ಬಳಿಕ ಆಸ್ಪತ್ರೆಯಲ್ಲಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,ಮೃತರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡುವ ಕುರಿತು ರಾಜ್ಯ ಸರ್ಕಾರ ಕಂಪನಿ ಆಡಳಿತ ಮಂಡಳಿಯೊಂದಿಗೆ ಮಾತನಾಡಲಿದೆ. ಸರ್ಕಾರ ಮತ್ತು ಕಂಪನಿಯ ಕಡೆಯಿಂದ ಒಂದು ಕೋಟಿ ರೂ. ಪರಿಹಾರ ಪಾವತಿಸಲಾಗುವುದು ಎಂದು ನಾನು ಆದೇಶ ಹೊರಡಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ರಾಜ್ಯ ಸರ್ಕಾರ ತಕ್ಷಣದ ಮತ್ತು ತುರ್ತು ವೆಚ್ಚಗಳನ್ನು ಪೂರೈಸಲು ಮೃತರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡಲಿದೆ. ಗಂಭೀರವಾಗಿ ಗಾಯಗೊಂಡವರಿಗೆ 10 ಲಕ್ಷ ರೂ ಹಾಗೂ ಗಾಯಗೊಂಡು ಸ್ವಲ್ಪ ಚೇತರಿಸಿಕೊಂಡ ನಂತರ ಕೆಲಸಕ್ಕೆ ಮರಳಬಹುದಾದವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಔಷಧ ಘಟಕದಲ್ಲಿ ಶಂಕಿತ ರಾಸಾಯನಿಕ ಕ್ರಿಯೆಯಿಂದಾಗಿ ಸ್ಫೋಟ ಸಂಭವಿಸಿದ್ದು, ಇದು ಬೆಂಕಿ ಅವಘಡಕ್ಕೆ ಕಾರಣವಾಯಿತು ಎಂದು ರಾಜ್ಯ ಆರೋಗ್ಯ ಸಚಿವ ದಾಮೋದರ ರಾಜ ನರಸಿಂಹ ತಿಳಿಸಿದ್ದಾರೆ.