ಹೊಸದಿಗಂತ ಡಿಜಿಟಲ್ ಡೆಸ್ಕ್
ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ನಡುವೆ ತೆರಿಗೆ ಮಸೂದೆ ಸಮರ ತಾರಕಕ್ಕೇರಿದ್ದು, ಒಂದು ಕಾಲದಲ್ಲಿ ಡೊನಾಲ್ಡ್ ಟ್ರಂಪ್ ಆಪ್ತಮಿತ್ರ ಮತ್ತು ಸಲಹೆಗಾರರಾಗಿದ್ದ ಬಿಲಿಯನೇರ್ ಎಲಾನ್ ಮಸ್ಕ್ ಈ ಟ್ರಂಪ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಹೊಸ ಪಕ್ಷ ಕಟ್ಟುವುದಾಗಿ ಟ್ರಂಪ್ ಅವರಿಗೆ ಎಲಾನ್ ಮಸ್ಕ್ ಎಚ್ಚರಿಕೆ ನೀಡಿದ್ದಾರೆ.
ಮಸೂದೆಯನ್ನು ‘ಸಾಲ ಗುಲಾಮಗಿರಿ ಮಸೂದೆ’ ಎಂದು ಟೀಕಿಸಿರುವ ಮಸ್ಕ್ ಅವರು, ಅಮೆರಿಕ ಪಕ್ಷ’ ಎಂಬ ಹೊಸ ರಾಜಕೀಯ ಪಾರ್ಟಿ ಕಟ್ಟುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಅಂತಿಮ ಮತದಾನಕ್ಕೆ ಮುನ್ನ ಸೆನೆಟ್, ಟ್ರಂಪ್ ಅವರ ಮಸೂದೆ ಬಗ್ಗೆ ಚರ್ಚಿಸುತ್ತಿದ್ದ ಹೊತ್ತಲ್ಲೇ ಮಸ್ಕ್ ಈ ಹೇಳಿಕೆ ನೀಡಿದ್ದಾರೆ.
ಈ ಹುಚ್ಚು ಖರ್ಚು ಮಸೂದೆ ಅಂಗೀಕಾರವಾದರೆ ಮರುದಿನ ಅಮೆರಿಕ ಪಕ್ಷ ರಚನೆಯಾಗುತ್ತದೆ. ನಮ್ಮ ದೇಶಕ್ಕೆ ಡೆಮೋಕ್ರಾಟ್ ರಿಪಬ್ಲಿಕನ್ ಯುನಿ ಪಾರ್ಟಿಗೆ ಪರ್ಯಾಯ ಬೇಕಿದೆ. ಇದರಿಂದ ಜನರಿಗೆ ನಿಜವಾಗಿಯೂ ಧ್ವನಿ ಇರುತ್ತದೆ ಎಂದು ಮಸ್ಕ್ ಹೇಳಿದ್ದಾರೆ.
ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡುವುದಾಗಿ ಹೇಳಿ ಇದೀಗ ಇತಿಹಾಸದಲ್ಲಿಯೇ ಅತಿದೊಡ್ಡ ಸಾಲ ಹೆಚ್ಚಳದ ಮಸೂದೆ ಪರ ಮತ ಚಲಾಯಿಸಿರುವ ಪ್ರತಿಯೊಬ್ಬ ಸದಸ್ಯರು ನಾಚಿಕೆಯಿಂದ ತಲೆ ತಗ್ಗಿಸಬೇಕು. ಇವರೆಲ್ಲ ಮುಂದಿನ ವರ್ಷ ಚುನಾವಣೆಯಲ್ಲಿ ತಮ್ಮ ಅಧಿಕಾರವನ್ನು ಕಳೆದುಕೊಳ್ಳುವಂತೆ ನಾನು ಮಾಡುತ್ತೇನೆ. ಹುಚ್ಚುತನದ ಖರ್ಚು ಮಸೂದೆ ಅಂಗೀಕಾರವಾದ ಮರುದಿನವೇ ಹೊಸ ಪಕ್ಷ ರಚನೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿನಕ್ಕೊಂದು ಹೊಸ ವರಸೆ ತೆಗೆಯುತ್ತಿದ್ದು, ಅವರ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುತ್ತಿವೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರ ಹೊಸ ತೆರಿಗೆ ನೀತಿ, ಜಾಗತಿಕ ಆರ್ಥಿಕತೆಯನ್ನೇ ಅಲುಗಾಡಿಸುತ್ತಿದೆ.