February 5, 2026
Thursday, February 5, 2026
spot_img

ಪ್ರಧಾನಿ ಉತ್ತರವಿಲ್ಲದೆ ರಾಷ್ಟ್ರಪತಿ ಭಾಷಣ ಅಂಗೀಕಾರ: 21 ವರ್ಷದ ಬಳಿಕ ಮುರಿದ ಸಂಪ್ರದಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಜೆಟ್ ಅಧಿವೇಶನದ ನಡುವೆ ಗುರುವಾರ ಲೋಕಸಭೆಯಲ್ಲಿ ಅಪರೂಪದ ಬೆಳವಣಿಗೆ ಕಂಡುಬಂದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣಕ್ಕೆ ಸಂಬಂಧಿಸಿದ ಧನ್ಯವಾದ ನಿರ್ಣಯವನ್ನು ಪ್ರಧಾನಿಯವರ ಪ್ರತಿಕ್ರಿಯೆಯಿಲ್ಲದೆ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಸುಮಾರು 21 ವರ್ಷದ ಬಳಿಕ ಸಂಸತ್ತಿನ ಸಂಪ್ರದಾಯದಲ್ಲಿ ಇಂತಹ ಬದಲಾವಣೆ ಕಂಡುಬಂದಿರುವುದು ಗಮನಾರ್ಹವಾಗಿದೆ.

ಸಂಸತ್ತಿನಲ್ಲಿ ನಿರಂತರ ಗದ್ದಲ ಮತ್ತು ವಿರೋಧ ಪಕ್ಷದ ಪ್ರತಿಭಟನೆಗಳ ಕಾರಣದಿಂದ ಕಲಾಪಗಳು ಸರಾಗವಾಗಿ ನಡೆಯಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭಾಷಣದ ಕುರಿತು ಉತ್ತರ ನೀಡಬೇಕಿದ್ದರೂ, ಪದೇ ಪದೇ ಕಲಾಪ ಸ್ಥಗಿತಗೊಂಡ ಹಿನ್ನೆಲೆ ಅದಕ್ಕೆ ಅವಕಾಶ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಧನ್ಯವಾದ ನಿರ್ಣಯವನ್ನು ಓದಿ, ಸದನದಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಿದರು.

ಬೆಳಿಗ್ಗೆ ಕಲಾಪ ಆರಂಭವಾದ ಕೆಲವೇ ಕ್ಷಣಗಳಲ್ಲಿ ಮತ್ತೆ ಗದ್ದಲ ಹೆಚ್ಚಾಗಿ ಸದನವನ್ನು ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ವಿರೋಧ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಮುಂದುವರೆಸಿದರು. ಇತ್ತೀಚೆಗೆ ಕೆಲವು ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಿರುವ ವಿಚಾರವೂ ಈ ಗೊಂದಲಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. 2004ರ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿಯವರ ಪ್ರತಿಕ್ರಿಯೆಯಿಲ್ಲದೆ ನಿರ್ಣಯ ಅಂಗೀಕರಿಸಲಾಗಿದೆ ಎಂಬುದು ವಿಶೇಷ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !