ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಗಾರು ಬೆಳೆಗಳ ಮಾರುಕಟ್ಟೆ ಪ್ರವೇಶದ ಸಂದರ್ಭದಲ್ಲಿ ಬೆಲೆ ಕುಸಿತದ ಆತಂಕ ಎದುರಿಸುತ್ತಿರುವ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದ ಖರೀದಿ ಯೋಜನೆ ಬೆಂಬಲ ನೀಡುವ ನಿರೀಕ್ಷೆ ಮೂಡಿಸಿದೆ.
2026-27ನೇ ಸಾಲಿನ ಖರೀಫ್ ಋತುವಿನಲ್ಲಿ ರಾಜ್ಯದ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ (MSP) ಅಡಿ ಖರೀದಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಲೆ ಬೆಂಬಲ ಯೋಜನೆ (PSS) ಅಡಿ ಸರ್ಕಾರ ನಿಗದಿತ ಪ್ರಮಾಣದ ಕೃಷಿ ಉತ್ಪನ್ನಗಳನ್ನು ನೇರವಾಗಿ ರೈತರಿಂದ ಖರೀದಿಸಲಿದೆ. ಲಭ್ಯ ಮಾಹಿತಿಯ ಪ್ರಕಾರ, ಕರ್ನಾಟಕದಿಂದ 1,15,500 ಮೆಟ್ರಿಕ್ ಟನ್ ಸೋಯಾಬೀನ್, 38,250 ಮೆಟ್ರಿಕ್ ಟನ್ ಹೆಸರುಕಾಳು ಹಾಗೂ 13,413 ಮೆಟ್ರಿಕ್ ಟನ್ ಸೂರ್ಯಕಾಂತಿ ಖರೀದಿಸಲು ಅನುಮತಿ ನೀಡಲಾಗಿದೆ.
ಬೆಂಬಲ ಖರೀದಿಯಿಂದ ಒತ್ತಡವನ್ನು ಕಡಿಮೆ
ಮುಂಗಾರು ಬೆಳೆಗಳ ಕೊಯ್ಲು ಆರಂಭವಾಗುತ್ತಿರುವ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ದರ ಕುಸಿದರೆ ರೈತರು ಕಡಿಮೆ ಬೆಲೆಗೆ ಉತ್ಪನ್ನ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಬಹುದು. ಇಂತಹ ಸಂದರ್ಭದಲ್ಲಿ ಸರ್ಕಾರದ ಬೆಂಬಲ ಖರೀದಿ ವ್ಯವಸ್ಥೆ ಮಾರುಕಟ್ಟೆ ದರ ಮತ್ತು MSP ನಡುವಿನ ಅಂತರದಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ನೆರವಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರವು 2026-27ರ ಖರೀಫ್ ಹಂಗಾಮಿಗೆ 14 ಬೆಳೆಗಳ MSP ಪರಿಷ್ಕರಿಸಿದ್ದು, ಸೂರ್ಯಕಾಂತಿ ಬೀಜಕ್ಕೆ ಪ್ರತಿ ಕ್ವಿಂಟಲ್‌ಗೆ 622ರಷ್ಟು ಹೆಚ್ಚಳ ನೀಡಲಾಗಿದೆ.
ರಾಜ್ಯದ ಬೆಳೆಗಾರರ ಹಿತದೃಷ್ಟಿಯಿಂದ ಕೇಂದ್ರ ಕೃಷಿ ಸಚಿವಾಲಯದ ಮುಂದೆ ಖರೀದಿ ಪ್ರಸ್ತಾವನೆ ಇಡಲಾಗಿತ್ತು ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಪ್ರಸ್ತಾವನೆಗೆ ಅನುಮೋದನೆ ದೊರೆತಿರುವುದಾಗಿ ಅವರು ಹೇಳಿದ್ದಾರೆ.
ಸರ್ಕಾರದ ಖರೀದಿ ಪ್ರಕ್ರಿಯೆ ಜಾರಿಯಾದ ಬಳಿಕ ರೈತರಿಗೆ ಮಧ್ಯವರ್ತಿಗಳ ಮೇಲೆ ಅವಲಂಬಿತರಾಗದೆ ಅಧಿಕೃತ ಖರೀದಿ ವ್ಯವಸ್ಥೆಯ ಮೂಲಕ ಬೆಳೆ ಮಾರಾಟ ಮಾಡುವ ಅವಕಾಶ ದೊರೆಯಲಿದೆ. ಖರೀದಿ ಕೇಂದ್ರಗಳು, ನೋಂದಣಿ ಪ್ರಕ್ರಿಯೆ, ಗುಣಮಟ್ಟದ ಮಾನದಂಡಗಳು ಹಾಗೂ ಹಣ ಪಾವತಿಯ ಕುರಿತು ಸಂಬಂಧಿತ ಸಂಸ್ಥೆಗಳು ಮುಂದಿನ ಹಂತದಲ್ಲಿ ಮಾಹಿತಿ ನೀಡುವ ನಿರೀಕ್ಷೆಯಿದೆ.



