ಹೊಸದಿಗಂತ ವರದಿ ಚಿತ್ರದುರ್ಗ:
ಕಳ್ಳರ ಗುಂಪೊಂದು ಮೆದೇಹಳ್ಳಿ ಗ್ರಾಮದಲ್ಲಿ ರಾತ್ರಿ ಸಮಯದಲ್ಲಿ ಓಡಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಚಿತ್ರದುರ್ಗದ ಜನತೆ ಬೆಚ್ಚಿಬಿದ್ದಿದ್ದಾರೆ.
ಈ ಕಳ್ಳರ ಗುಂಪಿನಲ್ಲಿ ಎಲ್ಲರೂ ತಲೆ ಹಾಗೂ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದಾರೆ. ತಂಡದಲ್ಲಿ ಐದು ಜನರಿದ್ದು ಚಡ್ಡಿ ಧರಿಸಿದ್ದಾರೆ. ಹಾಗಾಗಿ ಇದು ಚಡ್ಡಿ ಗ್ಯಾಂಗ್ ಇರಬಹುದು ಎಂದು ಎಂಬ ಅನುಮಾನ ಮೂಡಿದೆ. ರಾತ್ರಿ ಸಮಯದಲ್ಲಿ ಮೆದೇಹಳ್ಳಿ ಗ್ರಾಮಕ್ಕೆ ಬಂದ ಕಳ್ಳರ ಗುಂಪು ಗ್ರಾಮದ ಬೋವಿ ಕಾಲೋನಿಯ ಬೀದಿಯಲ್ಲಿ ಸುತ್ತಾಡಿದೆ.
ಕೆಲವು ಮನೆಗಳ ಕಾಂಪೌಂಡ್ ಒಳಗೆ ಟಾರ್ಚ್ ಹಾಕಿ ಏನಾದರೂ ಸಿಗಬಹುದೆಂದು ಪರಿಶೀಲಿಸಿದೆ. ಕೈಯಲ್ಲಿ ಚೀಲ, ಮಚ್ಚು, ಚಾಕು ಮತ್ತಿತರ ಮಾರಕಾಸ್ತ್ರಗಳನ್ನು ಹಿಡಿದು ಓಡಾಡಿದ್ದಾರೆ. ಇವರನ್ನು ಕಂಡ ಗ್ರಾಮದ ಬೀದಿಗಳಲ್ಲಿನ ನಾಯಿಗಳು ಬೊಗಳಲು ಆರಂಭಿಸಿವೆ. ನಾಯಿಗಳ ಬೊಗಳುವಿಕೆಗೆ ಬೆದರಿದ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಬೆಳಿಗ್ಗೆ ಗ್ರಾಮಸ್ಥರು ಸಿ.ಸಿ. ಟಿ.ವಿ.ಯಲ್ಲಿ ಸೆರೆಯಾದ ದೃಶ್ಯವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಈ ಕುರಿತು ಪೊಲೀಸರಿಗೆ ವಿಷಯ ತಿಳಿಸಿದ್ದು, ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ್ ತಿಳಿಸಿದ್ದಾರೆ.