ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾದ ನಿರ್ದೇಶಕ ನಿತೇಶ್ ತಿವಾರಿ ಅವರ ‘ರಾಮಾಯಣ’ ಇದೀಗ ಸಿನಿಮಾ ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಉಂಟುಮಾಡಿದೆ. ಸುಮಾರು 835 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ, ಹಾಗೂ ಸನ್ನಿ ಡಿಯೋಲ್ ಹನುಮಂತನಾಗಿ ನಟಿಸುತ್ತಿದ್ದಾರೆ. ಈ ಬೃಹತ್ ತಾರಾಬಳಗದ ನಡುವೆ ಲಕ್ಷ್ಮಣನ ಪಾತ್ರಕ್ಕೆ ಟಿವಿ ನಟ ರವಿ ದುಬೆ ಅವರನ್ನು ಆಯ್ಕೆ ಮಾಡಲಾಗಿದೆ.
ರವಿ ದುಬೆ ಅವರು ‘ಜಮೈ ರಾಜ್’ ಮತ್ತು ‘ಸಾಸ್ ಬಿನಾ ಸಸುರಾಲ್’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಅವರು ಕಳೆದ ದಶಕದಿಂದ ತಮ್ಮ ವೈವಿಧ್ಯಮಯ ಪಾತ್ರಗಳಿಂದ ಮನೆಮಾತಾಗಿದ್ದಾರೆ. ಇದೀಗ ‘ರಾಮಾಯಣ’ ಚಿತ್ರದ ಮೂಲಕ ಬೃಹತ್ ಪರದೆಯತ್ತ ಪಾದಾರ್ಪಣೆ ಮಾಡುತ್ತಿದ್ದಾರೆ.
ವೃತ್ತಿಪರ ಬದುಕಿನೊಂದಿಗೆ ವೈಯಕ್ತಿಕ ಜೀವನವನ್ನೂ ಸಮರ್ಥವಾಗಿ ನಡೆಸುತ್ತಿರುವ ರವಿ, ಪತ್ನಿ ಹಾಗೂ ನಟಿ ಸರ್ಗುನ್ ಮೆಹ್ತಾ ಜೋಡಿ 150 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಸದ್ಯ ಅವರು ನಟನೆಯ ಜೊತೆಗೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದು, ತಮ್ಮದೇ ಸಂಗೀತ ಹಾಗೂ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಮುಂಬೈ ಹಾಗೂ ಪಂಜಾಬ್‌ನಲ್ಲಿಯೂ ಬಹುದೊಡ್ಡ ಬಂಗಲೆಗಳನ್ನು ಹೊಂದಿರುವ ಅವರು ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗಳಿಂದಲೂ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ.
ರವಿ ದುಬೆಯ ಸಿನೆಮಾ ಪ್ರವೇಶಕ್ಕೂ ಹಿಂದಿನ ದಿನಗಳಲ್ಲಿ, ಹಲವು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದರು. 2006ರ ‘ಸ್ತ್ರೀ ತೇರಿ ಕಹಾನಿ’ ಧಾರಾವಾಹಿಯ ಮೂಲಕ ತಮ್ಮ ನಟನಾ ಜೀವನ ಪ್ರಾರಂಭಿಸಿದ ರವಿ ದುಬೆ ‘ಯಹಾನ್ ಕೆ ಹಮ್ ಸಿಕಂದರ್’, ‘ಜಮೈ ರಾಜ್’, ‘12/24 ಕರೋಲ್ ಬಾಗ್’ ಮೊದಲಾದ ಟಿವಿ ಶೋಗಳ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು.