ಇನ್ನೂ ಎರಡು ತಿಂಗಳು ಬಾಕಿ ಇದೆ, ಏನಾದರೂ ಆಗಬಹುದು : ಹೊಸ ಬಾಂಬ್ ಸಿಡಿಸಿದ ರಾಜಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ರಾಜಕೀಯದಲ್ಲಿ ಸೆಪ್ಟೆಂಬರ್‌ ಕ್ರಾಂತಿಯ ಊಹಾಪೋಹಗಳಿಗೆ ಮತ್ತೊಂದು ಸ್ಪಷ್ಟತೆ ಲಭ್ಯವಾಗಿದೆ. ಸಹಕಾರ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಈ ವಿಚಾರವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. “ಇನ್ನೂ ಎರಡು ತಿಂಗಳು ಬಾಕಿ ಇದೆ, ಏನಾದರೂ ಆಗಬಹುದು” ಎಂಬ ಅವರ ಹೊಸ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದಕ್ಕೂ ಮುಂಚೆ, ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್‌ನಲ್ಲಿ ಬದಲಾವಣೆ ಅಥವಾ ಪ್ರಮುಖ ಬೆಳವಣಿಗೆ ಸಂಭವಿಸಬಹುದು ಎಂಬ ಹಿನ್ನೋಟದಲ್ಲಿ ರಾಜಣ್ಣ ಅವರ ಹೇಳಿಕೆ ತೀವ್ರ ಗಮನ ಸೆಳೆದಿತ್ತು. ಇದೀಗ ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಅವರು, “ನಾನು ಸೆಪ್ಟೆಂಬರ್‌ ಬಗ್ಗೆ ಈಗಲೇ ಎಲ್ಲವನ್ನೂ ಹೇಳಿಬಿಟ್ಟರೆ, ನಿಮಗೆ ಆಸಕ್ತಿ ಕಡಿಮೆಯಾಗಿಬಿಡುತ್ತದೆ. ಇನ್ನೂ ಎರಡು ತಿಂಗಳು ಬಾಕಿ ಇದೆ. ಅಷ್ಟರಲ್ಲಿ ದೇಶವನ್ನೇ ತಲೆಕೆಳಗಾಗಿಸಬಹುದು” ಎಂದು ಹೇಳುವ ಮೂಲಕ ರಾಜಕೀಯ ಬಾಂಬ್ ಸಿಡಿಸಿದ್ದಾರೆ.

ಸಿಎಂ ಬದಲಾವಣೆ ಅಥವಾ ಸಚಿವ ಸಂಪುಟ ಪುನರ್ ರಚನೆ ಎಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲೇ ರಾಜಣ್ಣ ಈ ಹೇಳಿಕೆ ನೀಡಿರುವುದು ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಅವರು ಈ ಹೇಳಿಕೆಯನ್ನು ವೈಯಕ್ತಿಕ ಅಭಿಪ್ರಾಯವೆಂದು ತಿರಸ್ಕರಿಸಿದ್ದಾರೆ. “ನಾನು ರಾಜಕೀಯದಲ್ಲಿ ಸಾಕಷ್ಟು ಕಾಲ ಇದ್ದವನು. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯಗಳಿರುತ್ತವೆ. ನಾನು ಹೇಳಿದ್ದನ್ನು ಪಕ್ಷ ಮತ್ತು ಸರ್ಕಾರ ಹೇಗೆ ತೆಗೆದುಕೊಳ್ಳುತ್ತದೆ ಎಂಬುದೇ ಮುಖ್ಯ, ಎಂದಿದ್ದಾರೆ.

ಎಐಸಿಸಿ ಉಸ್ತುವಾರಿಯಾಗಿ ರಾಜ್ಯಕ್ಕೆ ಬಂದಿರುವ ರಣದೀಪ್ ಸಿಂಗ್ ಸುರ್ಜೇವಾಲರ ಭೇಟಿ ಕುರಿತ ಪ್ರಶ್ನೆಗೆ ರಾಜಣ್ಣ, ಅವರು ಮೊದಲು ಏನು ಮಾಡಿದರೋ, ಈಗಲೂ ಅದನ್ನೇ ಮಾಡಿದ್ದಾರೆ. ಅವರು ಏನಾದರೂ ನೋಡಿದರೆ, ಹೈಕಮಾಂಡ್‌ಗೆ ವರದಿ ನೀಡುವುದು ಅವರ ಜವಾಬ್ದಾರಿ. ಅದರಲ್ಲಿ ವಿಶೇಷತೆಯನ್ನು ಹುಡುಕಬಾರದು ಎಂದು ತಣ್ಣನೆಯ ಉತ್ತರ ನೀಡಿದ್ದಾರೆ.

ರಾಜಣ್ಣನವರ ಸೆಪ್ಟೆಂಬರ್‌ ಕ್ರಾಂತಿ ಹೇಳಿಕೆಯಿಂದ ಮತ್ತೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಬರಬಹುದೆಂಬ ಅನುಮಾನಗಳು ಹುಟ್ಟಿವೆ. ಸೆಪ್ಟೆಂಬರ್‌ ತಿಂಗಳು ಏನಾದರೂ ರಾಜಕೀಯ ತಿರುವಿಗೆ ಕಾರಣವಾಗಬಹುದೆಂಬ ಊಹಾಪೋಹಗಳು ಪಕ್ಷದ ಒಳಾಂಗಣದಲ್ಲೂ ಚರ್ಚೆಗೆ ಗ್ರಾಸವಾಗಿವೆ. ಅವರ ಹೇಳಿಕೆ ಹಾಸ್ಯಮಿಶ್ರಿತವಾಗಿದ್ದರೂ ಅದರ ಹಿಂದಿರುವ ಸಂದೇಶ ರಾಜಕೀಯ ತಜ್ಞರಲ್ಲಿ ಗಂಭೀರ ಚರ್ಚೆಗೆ ನಾಂದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!