ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಟೆಸ್ಟ್ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಸ್ಥಾನವನ್ನು ಯಾರಿಗೆ ನೀಡಲಾಗುತ್ತದೆ ಎಂಬ ಪ್ರಶ್ನೆಗೆ ಇದೀಗ ಸ್ಪಷ್ಟತೆ ಸಿಕ್ಕಿದ್ದು, ಅದಕ್ಕೆ ಉತ್ತರವಾಗಿದ್ದಾರೆ ಯುವ ಬ್ಯಾಟ್ಸ್ಮನ್ ಶುಭ್ಮನ್ ಗಿಲ್. ವಿರಾಟ್ ಕೊಹ್ಲಿಯ ಸ್ಥಾನವನ್ನು ಮಾತ್ರ ಭರ್ತಿಮಾಡಿರುವುದಲ್ಲ, ಅವರದೇ ದಾಖಲೆಗಳನ್ನು ಮುರಿಯುವ ಮೂಲಕ ಗಿಲ್ ಇದೀಗ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಎಡ್ಜ್ಬಾಸ್ಟನ್ ಟೆಸ್ಟ್ನ ಮೂರನೇ ಇನಿಂಗ್ಸ್ನಲ್ಲಿ ಭರ್ಜರಿ ಶತಕ ಸಿಡಿಸಿದ ಗಿಲ್ ಆಟಕ್ಕೆ ಸ್ವತಃ ವಿರಾಟ್ ಕೊಹ್ಲಿಯವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಗಿಲ್ ಫೋಟೋ ಹಂಚಿಕೊಂಡಿರುವ ಕೊಹ್ಲಿ, “ಚೆನ್ನಾಗಿ ಆಡಿದ್ದೀಯ ಸ್ಟಾರ್ ಬಾಯ್. ನೀವು ಇತಿಹಾಸವನ್ನು ಪುನಃ ಬರೆಯುತ್ತೀರಿ. ಇಲ್ಲಿಂದ ಮುಂದುವರಿಯಿರಿ ಮತ್ತು ಮತ್ತಷ್ಟು ಏತ್ತರಕ್ಕೇರಿ.. ಇದಕ್ಕೆಲ್ಲ ನೀವು ಅರ್ಹರು,” ಎಂಬ ಪೋಸ್ಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಈ ಪಂದ್ಯದಲ್ಲಿ ಗಿಲ್ ಮೊದಲ ಇನಿಂಗ್ಸ್ನಲ್ಲಿ 269 ರನ್ಗಳ ದ್ವಿಶತಕ ಹಾಗೂ ದ್ವಿತೀಯ ಇನಿಂಗ್ಸ್ನಲ್ಲಿ 161 ರನ್ ಸಿಡಿಸಿದರು. ಇದರೊಂದಿಗೆ ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಎರಡನೇ ಬ್ಯಾಟರ್ ಎನಿಸಿಕೊಂಡರು. ಈ ಪ್ರದರ್ಶನದಿಂದ ಅವರು ವಿರಾಟ್ ಕೊಹ್ಲಿಯ ಹಲವು ದಾಖಲೆಗಳನ್ನು ಮುರಿದಿದ್ದಾರೆ.
ವಿರಾಟ್ ಕೊಹ್ಲಿ 2014ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾಯಕತ್ವದ ಆರಂಭದಲ್ಲಿ ಮೊದಲ ಎರಡು ಟೆಸ್ಟ್ಗಳಲ್ಲಿ 449 ರನ್ ಗಳಿಸಿದ್ದರು. ಆದರೆ ಇದೀಗ ಯುವ ನಾಯಕ ಗಿಲ್ ತಮ್ಮ ನಾಯಕತ್ವದ ಮೊದಲ ಎರಡು ಪಂದ್ಯಗಳಲ್ಲಿ 585 ರನ್ ಗಳಿಸಿ ಹೊಸ ಕ್ರಿಕೆಟ್ ಶತಕದತ್ತ ದಿಕ್ಕು ತೋರಿಸಿದ್ದಾರೆ.