ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿಟರ್ಸ್‌ನ ಅಧಿಕೃತ X (ಹಳೆಯ ಟ್ವಿಟರ್) ಖಾತೆ @Reuters ಅನ್ನು ಭಾರತದಲ್ಲಿ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಭಾರತದ ಬಳಕೆದಾರರು ಈ ಖಾತೆಯನ್ನು ತೆರೆಯಲು ಯತ್ನಿಸಿದಾಗ, “ಕಾನೂನು ಬೇಡಿಕೆಯಿಂದಾಗಿ ಈ ಖಾತೆ ಭಾರತದಲ್ಲಿ ಲಭ್ಯವಿಲ್ಲ” ಎಂಬ ನೋಟಿಫಿಕೇಶನ್ ಕಾಣಿಸುತ್ತಿದೆ.
ಈ ಬೆಳವಣಿಗೆ ಪತ್ರಿಕೋದ್ಯಮ ಸ್ವಾತಂತ್ರ್ಯ ಮತ್ತು ಡಿಜಿಟಲ್ ತಾಣಗಳ ಕಾರ್ಯಚಟುವಟಿಕೆಯಲ್ಲಿ ನಿಗಾವಹಿಸುವ ಪ್ರಶ್ನೆಗಳನ್ನು ಮತ್ತೆ ಎಬ್ಬಿಸಿದೆ. ಆದರೆ, ಈ ಬಗ್ಗೆ ಭಾರತ ಸರ್ಕಾರ ಹೇಳಿಕೆ ನೀಡಿದ್ದು, ನಿರ್ಬಂಧಿಸುವ ಬಗ್ಗೆ ನಾವು ಯಾವುದೇ ಆದೇಶವನ್ನು ನೀಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇತ್ತ, ಎಲಾನ್ ಮಸ್ಕ್ ಒಡೆತನದ ಎಕ್ಸ್ (X) ವೇದಿಕೆಯು ಈ ಕ್ರಮ ಕೈಗೊಂಡಿರುವ ಹಿನ್ನೆಲೆ ಕುರಿತಂತೆ ಸ್ಪಷ್ಟನೆ ನೀಡಬೇಕೆಂದು ಕೇಳಿಕೊಳ್ಳಲಾಗಿದೆ. ಮೂಲಗಳ ಪ್ರಕಾರ, ಮೇ 7 ರಂದು ನಡೆದಿದ್ದ ಆಪರೇಷನ್ ಸಿಂಧೂರ್ ವೇಳೆ ನೂರಾರು ಖಾತೆಗಳನ್ನು ನಿರ್ಬಂಧಿಸುವಂತೆ ಸರ್ಕಾರ ವಿನಂತಿಸಿತ್ತು. ಆದರೆ, ಆ ವೇಳೆ ರಾಯಿಟರ್ಸ್ ಖಾತೆ ಯಾವ ನಿರ್ಬಂಧಕ್ಕೂ ಒಳಗಾಗಿಲ್ಲ. ಇದೀಗ ವಿಳಂಬವಾಗಿ ಆ ಆಜ್ಞೆ ಜಾರಿಯಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಪಿಟಿಐ ಮೂಲಗಳ ಪ್ರಕಾರ, ರಾಯಿಟರ್ಸ್ ಖಾತೆ ನಿರ್ಬಂಧ ಪ್ರಕಾರ ಎಕ್ಸ್‌ನೊಳಗೆ ಯಾವುದೋ ದೋಷದಿಂದಾಗಿದೆಯೇ ಎಂಬುದು ಈಗ ಕೇಂದ್ರದ ತನಿಖೆಗೆ ಒಳಪಡಲಿದೆ. ಸರ್ಕಾರವು x ವೇದಿಕೆಯಿಂದ ಸ್ಪಷ್ಟನೆ ಕೋರಿ, ಸೆನ್ಸಾರ್‌ಶಿಪ್ ತೆರವು ಮಾಡುವಂತೆ ಸೂಚಿಸಿದೆ.
ಭಾರತದಲ್ಲಿ @Reuters (ಮುಖ್ಯ ಖಾತೆ) ಮತ್ತು @ReutersWorld ಖಾತೆಗಳಿಗೆ ಮಾತ್ರ ನಿರ್ಬಂಧ ಜಾರಿಯಾಗಿದೆ. ಇನ್ನು @ReutersAsia, @ReutersTech ಮತ್ತು @ReutersFactCheck ಖಾತೆಗಳು ಭಾರತದಲ್ಲಿ ಲಭ್ಯವಿವೆ. ಇದರಿಂದ ಸಂಪೂರ್ಣ ನಿಷೇಧವಲ್ಲ, ಆಯ್ದ ನಿರ್ಬಂಧ ಮಾತ್ರ ಎಂಬುದು ಸ್ಪಷ್ಟವಾಗಿದೆ.