ರಾಜ್ಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಉನ್ನತ ಸ್ಥಾನ ಸಿಗಲಿ: ರಂಭಾಪುರಿ ಶ್ರೀ ಆಶಯ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಅವರು ಹೆಚ್ಚಿನ ಶಕ್ತಿ ತುಂಬಿದ್ದು, ಚುನಾವಣೆ ನಂತರ ಅವರಿಗೆ ಉನ್ನತ ಸ್ಥಾನ ಸಿಗಬೇಕಾಗಿತ್ತು. ಮುಂದಿನ ದಿನಗಳಲ್ಲಿ ಆ ಸ್ಥಾನ ಸಿಗಲಿ ಎಂದು ಬಾಳೆಹೊನ್ನೂರು ಶ್ರೀಮದ್‌ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಸಿದ್ದೇಶ್ವರಸ್ವಾಮಿ ಬೆಟ್ಟದಲ್ಲಿ ಮೆಟ್ಟಿಲುಗಳ ಉದ್ಘಾಟನೆ ಹಾಗೂ ಧರ್ಮಜಾಗೃತಿ ಸಮಾರಂಭದಲ್ಲಿ ಶ್ರೀಮದ್ ರಂಬಾಪುರಿ ಶ್ರೀಗಳು ಮಾತನಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ‌ಪ್ರಚಂಡ ಬಹುಮತ ಗಳಿಸಲು ಡಿ.ಕೆ.ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾದ ನಂತರ ಬಹಳ ಶ್ರಮ ಪಟ್ಟಿರುವುದು ರಾಜ್ಯದ ಜನರಿಗೆ ತಿಳಿದಿದೆ. ಚುನಾವಣೆ ನಂತರ ನಡೆದಿರುವ ಒಳ ಒಪ್ಪಂದ ರಾಷ್ಟ್ರೀಯ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ತಿಳಿದಿದೆ. ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಆದ ಒಡಂಬಡಿಕೆಯಂತೆ ನಡೆದುಕೊಂಡರೆ ಎಲ್ಲಾ ರಾಜಕಾರಣಿಗಳಿಗೆ ಗೌರವವಿದೆ ಎಂದರು.
ನಾಯಕತ್ವದ ವಿಚಾರವಾಗಿ ಕಾಂಗ್ರೆಸ್ ಪಕ್ಷದ ನಾಯಕರೇ ಅಲ್ಲಲ್ಲಿ ಮಾತನಾಡಿದ ವಿಚಾರ ಹೊರಬರುತ್ತಿದೆ. ಇದರ ಬಗ್ಗೆ ರಾಷ್ಟ್ರೀಯ ನಾಯಕರು ಸ್ಪಷ್ಟಣೆ ನೀಡಿ ತಿಳಿಗೊಳಿಸಿದರೆ ಜನರಲ್ಲಿ ನೆಮ್ಮದಿ ಉಂಟಾಗಲಿದೆ.‌ ಶಿವಕುಮಾರ್ ಅವರಿಗೂ ಉನ್ನತ ಸ್ಥಾನ ಸಿಕ್ಕರೆ ಅವರಿಗೂ ಸಮಾಧಾನವಾಗಲಿದೆ. ಮುಖ್ಯಮಂತ್ರಿ ಸ್ಥಾನ ದೊರೆಯುವ ತನಕ ಅಧ್ಯಕ್ಷ ಸ್ಥಾನ ಬಿಟ್ಟು ಕೊಡಿ ಎನ್ನುವ ತಾತ್ವಿಕತೆ ಪಕ್ಷದ ಉನ್ನತ ನಾಯಕರಿಗೆ ಇಲ್ಲ. ಆ ಸ್ಥಾನ ಭದ್ರ ಪಡಿಸಿದರೆ,‌ ಈ ಸ್ಥಾನ ಬಿಟ್ಟುಕೊಡುವುದರಲ್ಲಿ ಸಂದೇಹವಿಲ್ಲ. ರಾಷ್ಟ್ರೀಯ ನಾಯಕರು ಈ ಬಗ್ಗೆ ನಿರ್ಣಾಯಕತ್ಮಕವಾಗಿ ತಿಳಿಸದ ಹೊರತು ಬೇರೆಯವರು ತಿಳಿಸಿದರೆ ಪ್ರಯೋಜನವಿಲ್ಲ. ರಾಜಕೀಯದಲ್ಲಿ ರೀತಿ, ನೀತಿ, ನಿಯತ್ತು ಇರಬೇಕಾಗುತ್ತದೆ. ಈ ಹಿಂದೆ ಬಿಜೆಪಿಯಲ್ಲಿ ಆದಂತಹ ಘಟನೆ ನಮ್ಮಗೆಲ್ಲರಿಗೂ ತಿಳಿದಿದೆ. ಇದು ಕಾಂಗ್ರೆಸ್ ಅಲ್ಲಿ ಆಗಬಾರದು ಎಂಬುದು ನಮ್ಮ ಮಾತು ಎಂದರು. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ‌. ಆದರೆ ಈ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದವರು ಈ‌ ಮಾತನ್ನು ಹೇಳಿದರೆ ಬೇರೆ.‌ಆದರೆ ಆಡಳಿತ ಪಕ್ಷದವರೇ ಇದನ್ನು ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಎಂದು ಹೇಳುವುದಿಲ್ಲ. ಆದರೆ, ಅಭಿವೃದ್ಧಿ ಕೆಲಸಗಳನ್ನೂ ಮಾಡಬೇಕು ಎಂದು ಆಗ್ರಹಿಸುತ್ತೇನೆ. ನಾನು ಇಡೀ ರಾಜ್ಯ ‌ಪ್ರವಾಸ ಮಾಡುತ್ತಿದ್ದೇನೆ. ಯಾವುದೇ ಭಾಗಕ್ಕೆ ಹೋದರು ಜನರು ಇದೇ ಕೊರಗನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!