ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ 336 ರನ್‌ಗಳ ಅಂತರದಿಂದ ಗೆಲುವು ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇತರಂಡಗಳು ಒಂದೊಂದೆ ಗೆಲುವು ಪಡೆದು ಸರಣಿ ಸಮಬಲಗೊಂಡಿದೆ. ನಾಯಕತ್ವದಲ್ಲಿ ಎರಡನೇ ಪಂದ್ಯವನ್ನಾಡಿದ ಶುಭಮನ್ ಗಿಲ್‌ಗೆ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಗುವ ಮೊದಲ ಪ್ರಮುಖ ವಿಜಯವಾಗಿದೆ.
ಈ ಪಂದ್ಯದ ಪ್ರಮುಖ ತಾರೆ ಆಕಾಶ್ ದೀಪ್ ಇಂಗ್ಲೆಂಡ್ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಿತ್ತು ತಂಡದ ಗೆಲುವಿಗೆ ನಂದಿ ಹಾಡಿದರು. ಭಾರತ ತಂಡದ 608 ರನ್‌ಗಳ ಭಾರೀ ಗುರಿ ಎದುರು, ಇಂಗ್ಲೆಂಡ್ ಅಂತಿಮ ದಿನದಾಟದಲ್ಲಿ 68.1 ಓವರ್‌ಗಳಲ್ಲಿ 271 ರನ್‌ಗಳಿಗೆ ಸರ್ವಪತನ ಕಂಡಿತು.
ಇಂಗ್ಲೆಂಡ್ ಪರ ಧೈರ್ಯವಂತ ಆಟ ತೋರಿದ ಜ್ಯಾಮಿ ಸ್ಮಿತ್ 88 ರನ್ (99 ಎಸೆತ, 9 ಬೌಂಡರಿ, 4 ಸಿಕ್ಸರ್) ಗಳಿಸಿದರು. ಅವರು ಕ್ರಿಸ್ ವೋಕ್ಸ್ (7) ಜೊತೆ ಹಾಗೂ ನಂತರ ಜೋಶ್ ಟಾಂಗ್, ಬೈಡನ್ ಕಾರ್ಸ್ ಜೊತೆ ಡ್ರಾ ಸಾಧ್ಯತೆಯತ್ತ ಹೋರಾಟ ಮುಂದುವರಿಸಿದರು. ಆದರೆ ಆಕಾಶ್ ದೀಪ್ ಎಸೆತದಲ್ಲಿ ಸ್ಮಿತ್ ವಾಷಿಂಗ್ಟನ್ ಸುಂದರ್‌ಗೆ ಕ್ಯಾಚ್ ನೀಡಿದ ಕ್ಷಣದಲ್ಲಿ ಇಂಗ್ಲೆಂಡ್ ನಂಬಿಕೆ ಕುಸಿತವಾಯಿತು.
ಬೆನ್ ಸ್ಟೋಕ್ಸ್ 33 ರನ್ ಗಳಿಸಿ ಔಟಾದರೆ, ಹ್ಯಾರಿ ಬ್ರೂಕ್ 23 ರನ್ ಮಾತ್ರ ಬಾರಿಸಿದರು. ಒಲಿ ಪೊಪ್ ಕೂಡ 24 ರನ್ ಗೆ ವಿಕೆಟ್ ಕಳೆದುಕೊಂಡರು. ಇಂಗ್ಲೆಂಡ್ ಆರಂಭದಲ್ಲೇ 3 ಪ್ರಮುಖ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು.
ಆಕಾಶ್ ದೀಪ್ 6 ವಿಕೆಟ್‌ಗಳೊಂದಿಗೆ ಪಂದ್ಯಶ್ರೇಷ್ಠರಾದರೆ, ಸಿರಾಜ್, ಪ್ರಸಿದ್ಧ್ ಕೃಷ್ಣ, ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಕಿತ್ತರು. ಭಾರತ ಏಕಪಕ್ಷೀಯ ಗೆಲುವು ಸಾಧಿಸುವಲ್ಲಿ ತಂಡದ ಬೌಲಿಂಗ್ ಬಹುಪಾಲು ಪಾತ್ರವಹಿಸಿತು.
ಪಂದ್ಯದ ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್ – 587 ಆಲೌಟ್
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ – 407 ಆಲೌಟ್
ಭಾರತ ಎರಡನೇ ಇನ್ನಿಂಗ್ಸ್ – 427/6 ಡಿಕ್ಲೇರ್
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ – 271 ಆಲೌಟ್