ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಟೆಕ್ಸಾಸ್ ರಾಜ್ಯವನ್ನು ಭೀಕರ ಪ್ರವಾಹ ತನ್ನ ಭಯಾನಕ ತೋಳುಗಳಲ್ಲಿ ಆವರಿಸಿಕೊಂಡಿದ್ದು, ಇದುವರೆಗೆ 78 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 28 ಮಂದಿ ಮಕ್ಕಳು ಎಂಬುದು ವಿಷಾದನೀಯ ಸಂಗತಿಯಾಗಿದೆ. ಇನ್ನೂ 41 ಮಂದಿ ಕಾಣೆಯಾಗಿದ್ದು, ಕಳೆದ 100 ವರ್ಷಗಳಲ್ಲಿ ಇದೇ ಅತೀ ಭೀಕರ ಪ್ರವಾಹ ಎಂದು ಅಮೆರಿಕದ ವರದಿಗಳು ಸ್ಪಷ್ಟಪಡಿಸಿವೆ.
ಹವಾಮಾನ ಇಲಾಖೆ ಎಚ್ಚರಿಕೆ: ಮತ್ತಷ್ಟು ಗಾಳಿ-ಮಳೆ ಸಾಧ್ಯತೆ
ಮುಂದಿನ 48 ಗಂಟೆಗಳಲ್ಲಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ತೀವ್ರ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಜನತೆಗೆ ಎಚ್ಚರಿಕೆ ನೀಡಿದೆ. ರಕ್ಷಣಾ ಕಾರ್ಯಚರಣೆಗಳು ಸತತವಾಗಿ ಮುಂದುವರಿದಿದ್ದರೂ, ವಿಷಪೂರಿತ ಹಾವುಗಳ ಅಟ್ಟಹಾಸದಿಂದ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. ಕೆಲವು ಪ್ರದೇಶಗಳಲ್ಲಿ ಅಧಿಕಾರಿಗಳು ರಾತ್ರಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿರುವ ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇದು ನಿಜಕ್ಕೂ ಭಯಾನಕ ಸಂಗತಿ. ದೇವರು ಜನರಿಗೆ ಈ ಸಂಕಷ್ಟವನ್ನು ಸಹಿಸುವ ಶಕ್ತಿ ನೀಡಲಿ” ಎಂದು ಸಂತಾಪ ಸಂದೇಶ ನೀಡಿದ್ದು, ಈ ಶುಕ್ರವಾರ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಕ್ಷಣಾ ತಂಡಗಳು ದಿನ-ರಾತ್ರಿಯಲ್ಲದೇ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ 850ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಲಾಗಿದೆ. ಹಲವೆಡೆ ಬೋಟ್‌ಗಳ ಮೂಲಕ ಹಾಗೂ ಹೆಲಿಕಾಪ್ಟರ್ ನೆರವಿನಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.
ಈ ಪ್ರವಾಹದಿಂದ ಅಮೆರಿಕದಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿವಿಧ ರಾಜ್ಯಗಳ ರಕ್ಷಣಾ ಪಡೆಗಳು ಸಹ ಟೆಕ್ಸಾಸ್‌ಗೆ ಧಾವಿಸುತ್ತಿದ್ದು, ರಾಷ್ಟ್ರೀಯ ತುರ್ತು ನಿರ್ವಹಣಾ ಘಟಕಗಳು ಸ್ಥಳದಲ್ಲೇ ಬೀಡುಬಿಟ್ಟು ಕಾರ್ಯ ನಿರ್ವಹಿಸುತ್ತಿವೆ.