ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಟೆಂಪೊವೊಂದು ತಡೆಗೋಡೆಗೆ ಢಿಕ್ಕಿಯಾಗಿ ಅರ್ಧಕ್ಕೇ ಪೀಸ್ ಪೀಸ್ ಆದ ಘಟನೆ ನಡೆದಿದೆ.
ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ನೈಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅತಿವೇಗವಾಗಿ ಬಂದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಕ್ಯಾಬಿನ್ ತುಂಡಾಗಿ ಮೇಲು ಸೇತುವೆಯಿಂದ ಕೆಳಗೆ ಬಿದ್ದು ಚಾಲಕ ಸೇರಿ ಮೂವರು ಗಾಯಗೊಂಡಿದ್ದಾರೆ.
ಜ್ಞಾನಭಾರತಿ ಬಳಿಯ ನೈಸ್ ರಸ್ತೆಯ ರಾಮಸಂದ್ರ ಸೇತುವೆ ಬಳಿ ಶನಿವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ಘಟನೆ ನಡೆದಿದೆ ಎನ್ನಲಾಗಿದೆ.
ಟೆಂಪೋ ಚಾಲಕ ರಾಘವೇಂದ್ರ, ಸಹಾಯಕ ಸಲೀಂ ಮತ್ತು ಫಯಾಜ್ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.