ಹೊಸದಿಗಂತ ವರದಿ ಮಂಗಳೂರು:
ಗಿಡ ನೆಟ್ಟ ಬಳಿಕ ಎರಡು ವರ್ಷಗಳ ಕಾಲ ಗಿಡವನ್ನು ಪೋಷಿಸುವ ವಿಭಿನ್ನ, ಅಪೂರ್ವ ಸ್ಪರ್ಧೆಯೊಂದು ಮಂಗಳೂರಿನಲ್ಲಿ ಆಯೋಜನೆಗೊಂಡಿದೆ.
ಅರೆ, ಇದೇನು ಗಿಡ ನೆಡುವ ಸ್ಪರ್ಧೆ ಎಂದು ಯೋಚಿಸಬೇಡಿ. -ಲ ನೀಡುವ ಗಿಡಗಳನ್ನು ನೆಟ್ಟು ಅದನ್ನು ಆರೈಕೆ ಮಾಡಿ ಎರಡು ವರ್ಷಗಳ ಬಳಿಕ ಆರೋಗ್ಯವಂತ ಗಿಡಗಳನ್ನು ಪೋಷಿಸಿದ ಸ್ಪರ್ಧಾಳುವಿಗೆ ಬಹುಮಾನ ನೀಡುವ ಸ್ಪರ್ಧೆಯಿದು. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಕೆಆರ್ಎಂಎಸ್ಎಸ್) ಮಂಗಳೂರು ವಿಭಾಗ ಈ ಸ್ಪರ್ಧೆ ಆಯೋಜಿಸಿದೆ. ಯುಕೆಜಿಯಿಂದ ಸ್ನಾತಕೋತ್ತರವರೆಗಿನ ಶಾಲಾ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಸಾಮಾನ್ಯವಾಗಿ ಶಾಲಾ- ಕಾಲೇಜು, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅರಣ್ಯ ಇಲಾಖೆ ಸಹಯೋಗದೊಂದಿಗೆ ಮಳೆಗಾಲ ಆರಂಭಗೊಂಡ ಬಳಿಕ ಎಲ್ಲೆಡೆ ಗಿಡ ನೆಡಲಾಗುತ್ತದೆ. ವನಮಹೋತ್ಸವ ಹೆಸರಿನಲ್ಲಿ ಪ್ರಚಾರ ಪಡೆದು ಕಾರ್ಯಕ್ರಮಗಳು ನಡೆಯುತ್ತವೆ. ಶಾಲೆಯ ಆವರಣ, ರಸ್ತೆ ಬದಿ, ಪಾರ್ಕ್, ಖಾಸಗಿ ಸ್ಥಳಗಳಲ್ಲಿ ಗಿಡ ನೆಟ್ಟು -ಟೊಗೆ -ಸ್ ನೀಡುತ್ತಾರೆ. ಆದರೆ, ನೆಟ್ಟ ಗಿಡಗಳನ್ನು ಪೋಷಿಸಲು ಯಾರೂ ಉತ್ಸಾಹ ತೋರುವುದಿಲ್ಲ. ಬೇಸಗೆ ಆರಂಭವಾದ ಬಳಿಕ ವನಮಹೋತ್ಸವ ಮೂಲಕ ಜೀವ ಪಡೆದ ಗಿಡಗಳು ಒಣಗುತ್ತವೆ. ಮುಂದಿನ ವರ್ಷ ಮತ್ತೆ ಅದೇ ಹೊಂಡದಲ್ಲಿ ವನಮಹೋತ್ಸವ. ಹೀಗಾಗಬಾರದು ಎಂಬ ದೃಷ್ಟಿಯಿಂದ ಪರಿಸರ ಸಂರಕ್ಷಣೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ದ್ವಿವರ್ಷೀಯ ಗಿಡ ನೆಡುವ ಸ್ಪರ್ಧೆ ನಡೆಸಲು ಕೆಆರ್ಎಂಎಸ್ಎಸ್ ಮುಂದಾಗಿದೆ.
ಗಿಡಗಳ ಆಯ್ಕೆ ಬಹೂಪಯೋಗಿ ಆಗಿರಬೇಕು, ಖಾಸಗಿ ಸರ್ಕಾರಿ ಜಾಗ, ಶಾಲೆಯ ಆವರಣದಲ್ಲಿ ಎಷ್ಟು ಸಾಧ್ಯವೋ ಅಷ್ಟು ಗಿಡಗಳನ್ನು ನೆಟ್ಟು ಫೋಟೋ ಮತ್ತು ವೀಡಿಯೋ ಕಳುಹಿಸಬೇಕು. ಜೊತೆಗೆ ಗಿಡಕ್ಕೆ ಒಂದು ಹೆಸರಿಡಬೇಕು ಹೇಳಲಾಗಿದೆ. ಆ ಆಮೂಲಕ ಗಿಡದ ಜತೆ ಬಾಂಧವ್ಯವನ್ನು ಬೆಳೆಸುವ ಕಾರ್ಯವನ್ನು ಸೂಕ್ಷ್ಮವಾಗಿ ಮಾಡಲಾಗುತ್ತಿದೆ.
ಯಾವುದೇ ಒಂದು ವೃಕ್ಷದ ಗಿಡ ಜೀವ ಹಿಡಿಯಬೇಕಾದರೆ ಕನಿಷ್ಟ ಎರಡು ವರ್ಷಬೇಕು. ಅದರ ನಂತರ ಅದು ಯಾರ ಸಹಾಯವೂ ಇಲ್ಲದೆ ಬೆಳೆಯಲು ಶಕ್ತಿಯನ್ನು ಹೊಂದುತ್ತದೆ. ಇಲ್ಲಿ ಕೇವಲ ಸ್ಪರ್ಧೆಯನ್ನು ನಡೆಸಬೇಕು ಎಂದು ಮಾತ್ರ ಉದ್ದೇಶವಲ್ಲ. ಪ್ರಕೃತಿ ಸಂರಕ್ಷಣೆ ಮುಖ್ಯ ಧ್ಯೇಯ.
ಗಿಡ ನೆಡುವ ಸ್ಪರ್ಧೆ 2025 ರಿಂದ 2027ರವರೆಗೆ ನಡೆಯಲಿದೆ. ಜೂನ್ 5 ರಿಂದ ಸ್ಪರ್ಧೆ ಆರಂಭಗೊಂಡಿದ್ದು, ಜುಲೈ 31ರೊಳಗೆ ಗಿಡಗಳನ್ನು ನೆಡಬಹುದು. ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಗಿಡವು ಫಲವಂತ ಅಥವಾ ಉಪಯೋಗಿ ವೃಕ್ಷವಾಗಿರಬೇಕು (ಉದಾ: ಮಾವು, ಹಲಸು, ನೇರಳೆ). ನೀಡಲಾದ ಕ್ಯೂಆರ್ ಕೋಡ್ / ಗೂಗಲ್ ಫಾರ್ಮ್ ಮೂಲಕ ಹೆಸರು ನೋಂದಾಯಿಸಬೇಕು. ಪ್ರತಿ 6 ತಿಂಗಳಿಗೊಮ್ಮೆ ಗಿಡದ ಬೆಳವಣಿಗೆಯ ಫೋಟೋ ಅಥವಾ ವೀಡಿಯೋ ಕಳುಹಿಸಬೇಕು. 2027ರ ಜೂನ್ 5ರಂದು ಅತೀ ಹೆಚ್ಚು ಆರೋಗ್ಯವಂತ ಗಿಡಗಳನ್ನು ಬೆಳೆಸಿದ 10 ಸ್ಪರ್ಧಿಗಳಿಗೆ ವಿಶೇಷ ಕಾರ್ಯಕ್ರಮದಲ್ಲಿ ಗೌರವ ಹಾಗೂ ಪ್ರಶಸ್ತಿ ನೀಡಲಾಗುವುದು ಎಂದು ಸ್ಪರ್ಧೆಯ ಸಂಯೋಜಕಿ ಶ್ರುತಿ ಎನ್. ತಿಳಿಸಿದ್ದಾರೆ.
ಗೂಗಲ್ ಫಾರ್ಮ್ ಲಿಂಕ್ ಗಿಡ ನೆಡುವ ಸ್ಪರ್ಧೆಗೆ ನೋಂದಣಿಗೆ ಗೂಗಲ್ ಫಾರ್ಮ್ ಲಿಂಕ್ https://forms.gle/KwQrcYa9nU98Lxf68 ಹೆಚ್ಚಿನ ಮಾಹಿತಿಗಾಗಿ ದೂ. 90085 67748, 8050160414 ಸಂಪರ್ಕಿಸಬಹುದು.