ಇದೆಲ್ಲಾ ಹೇಗೆ ಸಾಧ್ಯ? ಒಂದು ದಿನವೂ ಕೆಲಸಕ್ಕೆ ಬಾರದೆ 35 ಲಕ್ಷ ರೂ. ಸಂಬಳ ಪಡೆದ ಪೊಲೀಸ್ ಕಾನ್ಸ್ಟೇಬಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಒಂದಲ್ಲ, ಎರಡಲ್ಲ ಬರೋಬ್ಬರಿ 12 ವರ್ಷಗಳ ಕಾಲ ಒಂದೇ ಒಂದು ದಿನವೂ ಕೆಲಸಕ್ಕೆ ಹೋಗದೆ ಪೊಲೀಸ್ ಕಾನ್ಸ್‌ಟೆಬಲ್‌ ಒಬ್ಬರು 35 ಲಕ್ಷ ರೂಪಾಯಿ ವೇತನ ಪಡೆದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 2011ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ನೇಮಕವಾಗಿದ್ದ ಅಭಿಷೇಕ್ ಎಂಬ ವ್ಯಕ್ತಿಯನ್ನು ಸಗರ ಪೊಲೀಸ್ ತರಬೇತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆತ ತರಬೇತಿ ಕೇಂದ್ರಕ್ಕೆ ಹೋಗದೆ ಮನೆಗೆ ಮರಳಿದ್ದ. ಆದರೂ ವೇತನ ಮಾತ್ರ ಪ್ರತಿ ತಿಂಗಳು ಆತನ ಬ್ಯಾಂಕ್ ಖಾತೆಗೆ ಜಮಾ ಆಗಿದೆ.

ಸಗರ ಪೊಲೀಸ್ ತರಬೇತಿ ಕೇಂದ್ರಕ್ಕೆ ಆತ ತರಬೇತಿಗೆ ಹೋಗಿಲ್ಲ ಮತ್ತು ನಿರಂತರವಾಗಿ ಆತನ ಖಾತೆಗೆ ಸಂಬಳ ಜಮಾ ಆಗುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲ.

ಕರ್ತವ್ಯಕ್ಕೆ ಗೈರು ಹಾಜರಾದರೂ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿಲ್ಲ, ರಜೆಗೆ ಅರ್ಜಿಯನ್ನೂ ಸಲ್ಲಿಸಿಲ್ಲ. ಒಂದು ದಿನವೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡದಿದ್ದರೂ ಇಲಾಖೆಯಲ್ಲಿ ಆತನ ಹೆಸರು ದಾಖಲಾಗಿದೆ. ಮಾತ್ರವಲ್ಲ, 35 ಲಕ್ಷ ರೂ. ವೇತನ ಆತನ ಖಾತೆಗೆ ಜಮಾ ಆಗಿದೆ.

ಕಾನ್ಸ್ಟೇಬಲ್ ತನ್ನ ಸೇವಾ ದಾಖಲೆಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಭೋಪಾಲ್ ಪೊಲೀಸ್ ಲೈನ್ಸ್ ಗೆ ಕಳುಹಿಸಿದ್ದಾನೆ. ಆದರೆ, ಇದ್ಯಾವುದನ್ನೂ ಪರಿಶೀಲಿಸದೆ ದಾಖಲೆಗಳನ್ನು ಸ್ವೀಕರಿಸಿ ಅನುಮೋದಿಸಲಾಗಿದೆ. ತರಬೇತಿ ಕೇಂದ್ರದಲ್ಲಿ ಯಾರೂ ಅವನ ಗೈರುಹಾಜರಿಯನ್ನು ಗಮನಿಸಿಲ್ಲ. ಇಲಾಖೆಯಲ್ಲಿ ಬೆಳಕಿಗೆ ಬಂದಿರುವ ಈ ಪ್ರಕರಣ ಹಲವರ ಹುಬ್ಬೇರುವಂತೆ ಮಾಡಿದೆ.

2011ರ ಬ್ಯಾಚ್ ನಲ್ಲಿ ತರಬೇತಿ ಪಡೆದು ಸೇವೆ ಸಲ್ಲಿಸುತ್ತಿರುವವರಿಗೆ ಬಡ್ತಿ ನೀಡಲು ಕಡತ ಪರಿಶೀಲಿಸಿದಾಗ ಈ ಮಾಹಿತಿ ಬಹಿರಂಗವಾಗಿದೆ.

ಪೊಲೀಸ್ ಕಾನ್ಸ್ಟೇಬಲ್ ನೋಡಿದ ನೆನಪು ಯಾರಿಗೂ ಇರಲಿಲ್ಲ. ಆಂತರಿಕ ತನಿಖೆಯಲ್ಲಿ ಅಧಿಕಾರಿಗಳು ಕಾನ್ಸ್ಟೇಬಲ್’ನ ಹಿಂದಿನ ದಾಖಲೆಗಳು ಮತ್ತು ಸೇವಾ ಮಾಹಿತಿಯನ್ನು ಪತ್ತೆಹಚ್ಚಲು ಪ್ರಯತ್ನಿಸಿದರೂ ಅದು ವಿಫಲವಾಗಿದೆ. 12 ವರ್ಷಗಳ ಕಾಲ ಒಬ್ಬ ವ್ಯಕ್ತಿ ಕೆಲಸದಲ್ಲಿದ್ದು ಯಾವುದೇ ಮಾಹಿತಿ ಇಲ್ಲದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ನೆಗೆ ವಿಚಾರಣೆಗಾಗಿ ಕಾನ್ಸ್ಟೇಬಲ್ ಅನ್ನು ಕರೆಸಿದ್ದಾರೆ.

ವಿಚಾರಣೆ ವೇಳೆ ಕಾನ್ಸ್ಟೇಬಲ್ ತನಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳಿಕೊಂಡಿದ್ದಾನೆಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!