ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಹಿನ್ನೆಲೆಯಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಭೇಟಿ ನೀಡಿದರು.
ಈ ಸಂದರ್ಭ ಅವರು ವೈದ್ಯರೊಂದಿಗೆ ಸಭೆ ನಡೆಸಿ, ಮಾಹಿತಿ ಪಡೆದು ವರದಿ ನೀಡುವಂತೆ ಸೂಚಿಸಿದರು. ಸಭೆಯಲ್ಲಿ ಡಿ ಎಸ್ ಓ ಚೇತನ್ ಸೇರಿದಂತೆ, ಹಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು.
ಹಾಸನದಲ್ಲೇ ಹೆಚ್ಚು ಹೃದಯಘಾತದ ಪ್ರಕರಣಗಳು ದಾಖಲಾಗಲು ಸೂಕ್ತ ಕಾರಣ ಪತ್ತೆ ಹಚ್ಚಬೇಕಿದೆ. ಸರ್ಕಾರಕ್ಕೆ ಲೆಕ್ಕ ನೀಡಬೇಕೆಂದು, ಪ್ರಕರಣ ದಾಖಲಿಸಬೇಡಿ ಎಂದು ವೈದ್ಯರಿಗೆ ಎಚ್ಚರಿಕೆ ನೀಡಿದ ಅವರು, ಚಿಕಿತ್ಸೆಗೆ ಸೂಕ್ತ ಕ್ಯಾಥ್ ಲ್ಯಾಬ್ ವ್ಯವಸ್ಥೆ ಇಲ್ಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಧಿವೇಶನ ಆರಂಭಕ್ಕೂ ಮುನ್ನಾ, ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ವೈದ್ಯರಿಗೆ ಸೂಚನೆ ನೀಡಿದರು.
ಇದೇ ವೇಳೆ ಹಾಸನ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಆರ್. ಅಶೋಕ, ಜಿಲ್ಲೆಯಲ್ಲಿ ಕಾಫಿ, ಮೆಣಸು, ಅಡಿಕೆ, ಜೋಳದ ಬೆಳೆ ಹಾನಿ ವೀಕ್ಷಿಸಲು ಶಾಸಕ ಸಿಮೆಂಟ್ ಮಂಜು ಹಾಗೂ ಪಕ್ಷದ ಅಧ್ಯಕ್ಷರೊಂದಿಗೆ ಪ್ರವಾಸ ಮಾಡುತ್ತಿರುವುದಾಗಿ ಹೇಳಿದರು. ಈ ಕೆಲಸವನ್ನು ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬೇಕಿತ್ತು ಎಂದ ಅವರು, ಈ ಬಾರಿ 12 ಸಾವಿರ ಎಕರೆಗಳಷ್ಟು ಜೋಳದ ಬೆಳೆ ನಾಶವಾಗಿದೆ. ಇತರೆ ಬೆಳೆಗಳೂ ಸಹ ರೋಗಕ್ಕೆ ತುತ್ತಾಗಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.