ಅಂದಾಜು ಒಂದು ಕೈಗೆ ಸರಿಹೊಂದುವಷ್ಟು ಇರುವ ಮೊಟ್ಟೆಯ ಒಳಗೆ, ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಿರುವ ಬಹುಮಟ್ಟದ ಪೌಷ್ಟಿಕತೆಯ ಸತ್ವಗಳು ಅಡಗಿರುವುದು ತಜ್ಞರು ಹೇಳುವ ಸ್ಪಷ್ಟ ಅಭಿಪ್ರಾಯ. ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ A, D, E, ಕೋಲೀನ್, ಲ್ಯೂಟೀನ್, ಝೆಕ್ಸಾಂಥಿನ್ ಮುಂತಾದ ಅಂಶಗಳು, ಬೆಳೆಯುತ್ತಿರುವ ದೇಹಕ್ಕೆ ಅಗತ್ಯವಿರುವ ಪೂರಕಗಳು. ಹೀಗಾಗಿ ದಿನನಿತ್ಯದ ಆಹಾರದಲ್ಲಿ ಮೊಟ್ಟೆ ಸೇರಿಸುವ ಅಭ್ಯಾಸ ಮಕ್ಕಳ ಆರೋಗ್ಯಕ್ಕೆ ತುಂಬಾ ನೆರವಾಗುತ್ತದೆ.
ಮಕ್ಕಳಿಗೆ ಮೊಟ್ಟೆ ನೀಡುವ ಸರಿಯಾದ ವಯಸ್ಸೇನು?
ತಜ್ಞರ ಪ್ರಕಾರ, ಮಗುವಿಗೆ ಆರು ತಿಂಗಳು ತುಂಬಿದ ನಂತರ, ಪೂರಕ ಆಹಾರದ ಭಾಗವಾಗಿ ಮೊಟ್ಟೆಯನ್ನು ಆರಂಭಿಸಬಹುದಾಗಿದೆ. ಈ ವಯಸ್ಸಿನಲ್ಲಿ, ತಾಯಿ ಹಾಲು ಮಾತ್ರ ಸಾಕಾಗದೇ, ಪೌಷ್ಟಿಕತೆಯ ಅಗತ್ಯವೂ ಹೆಚ್ಚಾಗುತ್ತದೆ. ಮೊಟ್ಟೆಗಳಲ್ಲಿ ಇರುತ್ತಾದ ಪ್ರೋಟೀನ್, ವಿಟಮಿನ್‌ಗಳು ಮತ್ತು ಖನಿಜಾಂಶಗಳು ಈ ಅಗತ್ಯಕ್ಕೆ ಉತ್ತಮ ಪೂರಕವಾಗುತ್ತವೆ.
ಆರಂಭದಲ್ಲಿ ಅರ್ಧ ಮೊಟ್ಟೆ ಅಥವಾ ಹಳದಿ ಭಾಗದಿಂದ ಪ್ರಾರಂಭಿಸಿ
ಮೊಟ್ಟೆಯು ಕೆಲವೊಮ್ಮೆ ಶಿಶುಗಳಿಗೆ ಅಲರ್ಜಿ ಅಥವಾ ಅಜೀರ್ಣ ಉಂಟುಮಾಡುವ ಸಾಧ್ಯತೆ ಇರುವ ಕಾರಣ, ಮೊದಲಿಗೆ ಮೊಟ್ಟೆಯ ಹಳದಿ ಭಾಗವನ್ನು ಸ್ವಲ್ಪ ಪ್ರಮಾಣದಲ್ಲಿ ನೀಡುವುದು ಸೂಕ್ತ. ನಂತರ ಯಾವುದೇ ಅಲರ್ಜಿಯ ಲಕ್ಷಣಗಳು ಕಂಡುಬರದೇ ಇದ್ದರೆ, ಮೊಟ್ಟೆಯ ಬಿಳಿ ಭಾಗವನ್ನೂ ಸೇರಿಸಿ ಸಂಪೂರ್ಣ ಮೊಟ್ಟೆ ನೀಡಬಹುದು.
ಒಂದು ವರ್ಷದ ನಂತರ, ದಿನಕ್ಕೆ ಒಂದು ಮೊಟ್ಟೆ ಸೂಕ್ತ
ಮಗು ಒಂದು ವರ್ಷ ತುಂಬಿದ ಬಳಿಕ, ಪ್ರತಿದಿನವೂ ಸಂಪೂರ್ಣ ಮೊಟ್ಟೆ ನೀಡಬಹುದಾಗಿದೆ. ಇದರಿಂದ ಸ್ನಾಯುಗಳ ಬೆಳವಣಿಗೆ, ಮೂಳೆಯ ಬಲವರ್ಧನೆ ಮತ್ತು ದೃಷ್ಟಿ ಶಕ್ತಿಗೆ ಸಹಾಯವಾಗುತ್ತದೆ. ಹೀಗಾಗಿ ಮೊಟ್ಟೆ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅಲರ್ಜಿಗೆ ಎಚ್ಚರಿಕೆ: ತಜ್ಞರ ಸಲಹೆ ಅವಶ್ಯಕ
ಅಲರ್ಜಿಯ ಲಕ್ಷಣಗಳು ಅಥವಾ ಜೀರ್ಣ ಸಮಸ್ಯೆಗಳ ಲಕ್ಷಣಗಳಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ಹಾಗೆಯೇ ಮೊಟ್ಟೆ ನೀಡುವ ಮೊದಲು ಅಥವಾ ನೀಡುವ ಪ್ರಕ್ರಿಯೆ ಆರಂಭಿಸುವಾಗ ಮಕ್ಕಳ ತಜ್ಞರ ಸಲಹೆ ಪಡೆಯುವುದು ಆರೋಗ್ಯದ ದೃಷ್ಟಿಯಿಂದ ಬಹುಮುಖ್ಯ.
ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಮೊಟ್ಟೆಯ ಪಾತ್ರ ಅಪಾರ. ಆದರೆ, ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ, ವೈದ್ಯಕೀಯ ಸಲಹೆಯೊಂದಿಗೆ ಮೊಟ್ಟೆ ನೀಡುವುದು ಉತ್ತಮ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)