ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಚಿತ್ರ ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ಮತ್ತು ದುಬಾರಿ ಯೋಜನೆಗಳಲ್ಲಿ ಒಂದಾಗಿದ್ದು, ಈಗಾಗಲೇ ಅದರ ಪ್ರಭಾವ ಷೇರು ಮಾರುಕಟ್ಟೆಯಲ್ಲೂ ಕಾಣಿಸಿದೆ. ರಣಬೀರ್ ಕಪೂರ್ ಅಭಿನಯದ ಈ ಚಿತ್ರವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್ ನಿರ್ಮಿಸುತ್ತಿದ್ದು, ಇದರ ಫಸ್ಟ್ ಲುಕ್ ಜುಲೈ 3 ರಂದು ಬಿಡುಗಡೆಯಾಯಿತು.
ಚಿತ್ರದ ಟೀಸರ್ ಬಿಡುಗಡೆಗೆ ಮೊದಲು ಮತ್ತು ನಂತರದ ಕೆಲವು ದಿನಗಳಲ್ಲಿ, ಪ್ರೈಮ್ ಫೋಕಸ್ ಸಂಸ್ಥೆಯ ಷೇರು ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಕೇವಲ 48 ಗಂಟೆಗಳಲ್ಲಿ ಮಾರುಕಟ್ಟೆ ಬಂಡವಾಳದಲ್ಲಿ 1,000 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಜೂನ್ 25ರಿಂದ ಜುಲೈ 1ರವರೆಗೆ ಷೇರು ಬೆಲೆ 30% ಹೆಚ್ಚಾಗಿದ್ದು, ರೂ.113.47 ರಿಂದ ರೂ.149.69ಕ್ಕೆ ಏರಿಕೆಯಾಗಿತ್ತು. ಟೀಸರ್ ಬಿಡುಗಡೆಯ ಎರಡು ದಿನಗಳೊಳಗೆ ಷೇರು ಬೆಲೆ ರೂ.175ಕ್ಕೆ ತಲುಪಿತ್ತು. ಆದರೆ ನಂತರ ಸ್ವಲ್ಪ ಕುಸಿತ ಕಂಡು ಕೊನೆಗೆ ರೂ.169ಕ್ಕೆ ತಲುಪಿತು.
ಈ ಪರಿಣಾಮವಾಗಿ ಕಂಪನಿಯ ಮಾರುಕಟ್ಟೆ ಬಂಡವಾಳವು ರೂ.4,638 ಕೋಟಿಯಿಂದ ರೂ.5,641 ಕೋಟಿಗೆ ಏರಿಕೆ ಕಂಡು, ಪ್ರಸ್ತುತ ಸುತ್ತು ಮಾರುಕಟ್ಟೆ ಮೌಲ್ಯವು ಸುಮಾರು ರೂ.5,200 ಕೋಟಿಗಳಾಗಿದೆ.
1,600 ಕೋಟಿ ರೂ. ಬಜೆಟ್ನಲ್ಲಿ ನಿರ್ಮಿಸಲಾಗುತ್ತಿರುವ ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ ನಟಿಸುತ್ತಿದ್ದಾರೆ. ರಣಬೀರ್ರನ್ನು ಪ್ರತಿ ಭಾಗಕ್ಕೆ 75 ಕೋಟಿ ರೂಪಾಯಿ ಸಂಭಾವನೆಯೊಂದಿಗೆ ಒಟ್ಟು 150 ಕೋಟಿ ರೂ. ಪಾವತಿಸಲಾಗುತ್ತಿದೆ ಎಂಬ ವರದಿಯಿದೆ.
‘ದಂಗಲ್’ ಹಾಗೂ ‘ಚಿಚೋರೆ’ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯವನ್ನು ಐಮ್ಯಾಕ್ಸ್ನಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಭಾಗ 1 ಅನ್ನು ದೀಪಾವಳಿ 2026ಕ್ಕೆ ಹಾಗೂ ಭಾಗ 2 ಅನ್ನು ದೀಪಾವಳಿ 2027ಕ್ಕೆ ಬಿಡುಗಡೆಯಾಗಲಿದೆ.
“ನಮ್ಮ ಸತ್ಯ. ನಮ್ಮ ಇತಿಹಾಸ” ಎಂಬ ಟ್ಯಾಗ್ಲೈನ್ನೊಂದಿಗೆ ಬಿಡುಗಡೆಯಾದ ಟೀಸರ್, 5,000 ವರ್ಷಗಳ ಹಿಂದಿನ ರಾಮಾಯಣದ ಭವ್ಯ ದೃಶ್ಯಾತ್ಮಕ ನೋಟವನ್ನು ಒದಗಿಸುತ್ತಿದೆ. VFX, ಸಂಗೀತ ಮತ್ತು ತಾರಾ ಬಳಗದಿಂದಾಗಿ ಅಭಿಮಾನಿಗಳಲ್ಲಿ ಅಪಾರ ಕುತೂಹಲ ಮೂಡಿಸಿದ್ದು, ಚಿತ್ರ ಬಿಡುಗಡೆಯ ಮೊದಲು ಇಷ್ಟೊಂದು ಲಾಭದ ಇತಿಹಾಸ ನಿರ್ಮಾಣವಾಗಿರುವುದು ಇಡೀ ಚಿತ್ರರಂಗದ ಗಮನ ಸೆಳೆದಿದೆ.