ನೆಟ್ಟಿಗೆ ಶಬ್ದ ಕೇಳಿಸಿದಾಗ ನಿಮಗೆ ಅದು ರಿಲಾಕ್ಸೇಶನ್ ಅಥವಾ ಒತ್ತಡ ಕಡಿಮೆಯಾಗುತ್ತೆ ಅನ್ನೋ ಭ್ರಮೆ ಉಂಟಾಗಬಹುದು. ಆದರೆ ಈ ಶಬ್ದದ ಹಿಂದಿರುವ ವೈಜ್ಞಾನಿಕ ಕಾರಣಗಳು ಮತ್ತಷ್ಟು ಆಸಕ್ತಿದಾಯಕವಾಗಿವೆ. ಹಾಗಾದರೆ, ಬೆರಳನ್ನು ನೆಟ್ಟಿಗೆ ತೆಗೆಯುವ ಅಭ್ಯಾಸ ನಿಜವಾಗಿಯೂ ಅಪಾಯಕಾರಿಯೇ? ಇಲ್ಲಿದೆ ಮಾಹಿತಿ.
ನೆಟ್ಟಿಗೆ ತೆಗೆಯುವಾಗ ಶಬ್ದ ಬರುವುದರ ಹಿಂದೆ ವೈಜ್ಞಾನಿಕ ಕಾರಣ
ನಮ್ಮ ಬೆರಳುಗಳಲ್ಲಿ “ಸೈನೋವಿಯಲ್ ದ್ರವ” ಎಂಬ ಲೂಬ್ರಿಕೇಟಿಂಗ್ ದ್ರವ ಇರುತ್ತದೆ. ಇದು ಬೆರಳು ಅಥವಾ ಇತರ ಕೀಲುಗಳಲ್ಲಿ ಮೂಳೆಗಳು ಸರಾಗವಾಗಿ ಚಲಿಸುವಂತೆ ಮಾಡುತ್ತದೆ. ನಾವು ನೆಟ್ಟಿಗೆ ತೆಗೆಯುವಾಗ, ಈ ದ್ರವದಲ್ಲಿ ಗ್ಯಾಸ್ ಗಳು (ನೈಸರ್ಗಿಕ ಅನಿಲಗಳು) ಸಂಚಯವಾಗುತ್ತವೆ. ತಕ್ಷಣ, ಈ ಗ್ಯಾಸುಗಳು ಗುಳ್ಳೆಗಳಾಗಿ ಸಿಡಿದು ಶಬ್ದ ಸೃಷ್ಟಿಸುತ್ತವೆ. ಇದನ್ನು “ಕ್ಯಾವಿಟೇಷನ್” ಎಫೆಕ್ಟ್ ಎಂದು ಕರೆಯಲಾಗುತ್ತದೆ.
ಅದರ ಪರಿಣಾಮದಿಂದ ಕೀಲುಗಳಿಗೆ ಹಾನಿಯಾಗುತ್ತದೆಯಾ?
ವೈದ್ಯಕೀಯ ಅಧ್ಯಯನಗಳ ಪ್ರಕಾರ, ನೆಟ್ಟಿಗೆ ತೆಗೆಯುವ ಅಭ್ಯಾಸದಿಂದ ಕೀಲುಗಳಿಗೆ ಯಾವುದೇ ಶಾರೀರಿಕ ಹಾನಿ ಆಗುತ್ತದೆಯೆಂದು ನೇರವಾದ ಪೂರಕ ಪುರಾವೆಗಳು ಇಲ್ಲ. 60 ವರ್ಷಗಳ ಕಾಲ ನಿಯಮಿತವಾಗಿ ಬೆರಳನ್ನು ನೆಟ್ಟಿಗೆ ತೆಗೆದ ವ್ಯಕ್ತಿಯ ಕೈ ಮತ್ತು ನೆಟ್ಟಿಗೆ ತೆಗೆಯದ ಮತ್ತೊಬ್ಬ ವ್ಯಕ್ತಿಯ ಕೈಗಳನ್ನು ಹೋಲಿಸಿದಾಗ, ಎರಡರಲ್ಲಿಯೂ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ ಎಂದು ಹೇಳುತ್ತದೆ ಒಂದು ಸಮೀಕ್ಷೆ.
ಆದರೆ, ಈ ಅಭ್ಯಾಸ ಇತರ ಅಜ್ಞಾತ ಪರಿಣಾಮಗಳನ್ನು ಉಂಟುಮಾಡಬಹುದು. ಉದಾಹರಣೆಗೆ, ಧ್ವನಿಯಿಂದ ಇತರರಿಗೆ ಅಸಹ್ಯ ಉಂಟಾಗಬಹುದು. ಕೆಲವು ಸಂದರ್ಭಗಳಲ್ಲಿ ಕೀಲುಗಳಲ್ಲಿ ಸಣ್ಣ ಉರಿಯೂತ ಅಥವಾ ನೋವಿಗೆ ಕಾರಣವಾಗಬಹುದು. ಹೆಚ್ಚಾಗಿ ತೊಂದರೆಯಿಲ್ಲದಿದ್ದರೂ ಇದು ಒಬ್ಬೊಬ್ಬರ ದೇಹದ ಸ್ಥಿತಿಗೆ ಅವಲಂಬಿತವಾಗಿರುತ್ತದೆ.
ನೆಟ್ಟಿಗೆ ತೆಗೆಯುವ ಅಭ್ಯಾಸವು ಆರೋಗ್ಯಕ್ಕೆ ತಕ್ಷಣದ ಹಾನಿ ತರುವುದಿಲ್ಲವಾದರೂ, ಇತರ ಪ್ರಯೋಜನಕಾರಿ ಮಾರ್ಗಗಳನ್ನು ಬಳಸಿಕೊಂಡು ಒತ್ತಡ ನಿವಾರಿಸಿಕೊಳ್ಳುವುದು ಉತ್ತಮ. ಯೋಗ, ಧ್ಯಾನ, ಅಥವಾ ಲಘು ವ್ಯಾಯಾಮಗಳು ನೈಸರ್ಗಿಕವಾಗಿ ನಿಮ್ಮ ದೈಹಿಕ ಹಾಗೂ ಮಾನಸಿಕ ಶಾಂತಿಗೆ ನೆರವಾಗುತ್ತವೆ.