ಹೊಸ ದಿಗಂತ ವರದಿ ಮಂಗಳೂರು:
ಠಾಣಾಧಿಕಾರಿಗಳ ಮತ್ತು ಸಿಬ್ಬಂದಿಗಳ ಕಾರ್ಯತತ್ಪರತೆಗೆ ಠಾಣೆಯ ಸ್ಥಿತಿಗತಿ ಅಡಿಗಲ್ಲಾಗುತ್ತದೆ.ಗ್ರಾಮೀಣ ಪ್ರದೇಶ ಸುಬ್ರಹ್ಮಣ್ಯದ ಪೋಲಿಸ್ ಠಾಣೆಯಲ್ಲಿನ ವ್ಯವಸ್ಥೆಗಳು ಮತ್ತು ಅವುಗಳನ್ನು ಅತ್ಯುತ್ತಮವಾಗಿ ಕಾಪಾಡಿಕೊಂಡು ಬಂದ ಬಗೆ ಸಂತಸ ತಂದಿದೆ. ಸುವ್ಯವಸ್ಥಿತ ರೀತಿಯಲ್ಲಿ ಠಾಣೆಯನ್ನು ಸ್ವಚ್ಛ ಮತ್ತು ಸುಂದರವಾಗಿ ಇರಿಸಿದ ಪರಿ ಶ್ಲಾಘನೀಯ. ಉದ್ಯಾವನ ಸೇರಿದಂತೆ ಇತರ ಸೌಂದರ್ಯ ವರ್ಧಕ ವ್ಯವಸ್ಥೆಗಳನ್ನು ಮಾಡಿ ಠಾಣೆಯ ಸೌಂದರ್ಯ ಕಾಪಾಡಿಕೊಂಡು ಬಂದಿರುವ ಗ್ರಾಮೀಣ ಠಾಣೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಸುಬ್ರಹ್ಮಣ್ಯ ಫೋಲೀಸ್ ಠಾಣೆಗೆ ಬುಧವಾರ ಭೇಟಿ ನೀಡಿದ ಅವರು ಠಾಣಾ ಕಟ್ಟಡ ಮತ್ತು ಉದ್ಯಾನವನನ್ನು ವೀಕ್ಷಿಸಿ, ಠಾಣಾಧಿಕಾರಿ ಮತ್ತು ಸಿಬ್ಬಂದಿಗಳನ್ನು ಶ್ಲಾಘಿಸಿ ಮಾತನಾಡಿದರು.
ರಾಜ್ಯದ ಪ್ರಸಿದ್ಧ ಕ್ಷೇತ್ರದಲ್ಲಿ ಒತ್ತಡದ ನಡುವೆಯೂ ತಾವು ನಿರ್ವಹಿಸುತ್ತಾ ಬರುತ್ತಿರುವ ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಮುಂದುವರೆಸಿ.ಅಲ್ಲದೆ ಠಾಣೆಯಲ್ಲಿ ಸಿಬ್ಬಂದಿಗಳ ಬಲ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿಗಳ ಕೊರತೆ ನೀಗಿಸಲು ಶೀಘ್ರ ಇಲ್ಲಿ ಹೊಸ ಸಿಬ್ಬಂದಿಗಳನ್ನು ನೇಮಿಸಲಾಗುವುದು ಎಂದರು.
ಠಾಣೆ ವೀಕ್ಷಣೆ ಮತ್ತು ಶ್ಲಾಘನೆ:
ಸುಬ್ರಹ್ಮಣ್ಯ ಪೋಲಿಸ್ ಠಾಣೆಗೆ ಭೇಟಿ ನೀಡಿದ ಸಚಿವರು ಠಾಣಾ ಕಟ್ಟಡವನ್ನು ವೀಕ್ಷಿಸಿದರು.ಠಾಣೆಯ ಒಳಗಿರುವ ವ್ಯವಸ್ಥೆಗಳನ್ನು, ಠಾಣಾಧಿಕಾರಿಗಳ ಕಚೇರಿ, ಠಾಣೆಯ ನಿರ್ವಹಣೆ, ಸುಂದರ ಉದ್ಯಾನವನ ಇತ್ಯಾದಿಗಳನ್ನು ವೀಕ್ಷಿಸಿದರು.ಠಾಣಾ ಕಟ್ಟಡದ ಸೌಂದರ್ಯವನ್ನು ಅತ್ಯುತ್ತಮವಾಗಿ ಕಾಪಾಡಿಕೊಂಡು ಬಂದ ಠಾಣಾಧಿಕಾರಿ ಕಾರ್ತಿಕ್.ಕೆ ಅವರನ್ನು ಶ್ಲಾಘಿಸಿ ಇಲ್ಲಿನ ಠಾಣಾ ವ್ಯವಸ್ಥೆ, ಕಾನೂನು ಸುವ್ಯವಸ್ಥೆ, ಸಿಬ್ಬಂದಿಗಳ ಬಗ್ಗೆ ತಿಳಿದುಕೊಂಡರು.
ಈ ಸಂದರ್ಭ ಹೆಚ್ಚುವರಿ ಎಸ್.ಪಿ -ರಾಜೇಂದ್ರ, ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ , ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಕಾತರಕಿ, ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್. ಎಸ್.ಇಂಜಾಡಿ, ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸೇರಿದಂತೆ ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.