ಎಂಜಿನಿಯರಿಂಗ್ ಸಹಿತ ವಿವಿಧ ಕೋರ್ಸ್ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲು ಆರಂಭ: ಕೆಇಎ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವೈದ್ಯಕೀಯ ಕೋರ್ಸ್ ಹೊರತುಪಡಿಸಿ, ಎಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ, ಬಿಪಿಟಿ, ಎಎಚ್ಎಸ್ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಂಕ್ ಬಿಟ್ಟಿದ್ದು, ಜುಲೈ 15ರವರೆಗೆ ಅವಕಾಶ ನೀಡಿದೆ. ಈ ಮೂಲಕ ಯುಜಿಸಿಇಟಿಗೆ ಸಂಬಂಧಿಸಿದಂತೆ ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್ ಗಳ ಪ್ರವೇಶಾತಿಗೆ ಮೊದಲ ಸುತ್ತಿನ ಸೀಟು ಹಂಚಿಕೆಯ ಪಟ್ಟಿಯನ್ನು ಕೆಇಎ ಪ್ರಕಟಿಸಿದೆ.

ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ, ಬಿಎಸ್‌ಸಿ ನರ್ಸಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ ಕೋರ್ಸ್‌ಗಳಿಗೆ ಸಂಬಂಧಿಸಿದ ಸೀಟ್ ಮ್ಯಾಟ್ರಿಕ್ಸ್ ಸಂಬಂಧಪಟ್ಟ ಇಲಾಖೆಗಳಿಂದ ಇನ್ನೂ ಬಂದಿಲ್ಲ. ಹೀಗಾಗಿ ಮ್ಯಾಟ್ರಿಕ್ಸ್ ಬಂದ ನಂತರ ಈ ಕೋರ್ಸ್‌ಗಳ ಪ್ರವೇಶಕ್ಕೂ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಣಕು ಫಲಿತಾಂಶವನ್ನು ಜುಲೈ 19ರಂದು ಪ್ರಕಟಿಸಲಾಗುವುದು. ಬಳಿಕ ಆದ್ಯತೆಗಳನ್ನು ಅದಲು- ಬದಲು ಮಾಡಿಕೊಳ್ಳಲು ಜು.22ರವರೆಗೆ ಅವಕಾಶ ಇರುತ್ತದೆ. ಜುಲೈ 25ರಂದು ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ವಿವರಿಸಿದರು.

ಅಭ್ಯರ್ಥಿಗಳು ಸೀಟ್ ಮ್ಯಾಟ್ರಿಕ್ಸ್ ನೋಡಿಕೊಂಡು ಇಚ್ಛೆ/ಆಯ್ಕೆಗಳನ್ನು ದಾಖಲಿಸುವಾಗ ಆದ್ಯತಾ ಕ್ರಮಗಳನ್ನು ಅನುಸರಿಸಬೇಕು. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಯುಜಿಸಿಇಟಿ-25 ಸೀಟು ಹಂಚಿಕೆಯ ಮಾಹಿತಿ ಪುಸ್ತಕದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳಬೇಕು. ಅಲ್ಲದೆ, ಕೆಇಎ ವಿಕಸನ ಯೂಟ್ಯೂಬ್ ಚಾನಲ್‌ನಲ್ಲಿ ಇರುವ ವೀಡಿಯೊ ಕೂಡ ನೋಡಬಹುದು ಎಂದು ಸಲಹೆ ನೀಡಿದರು.

ಪಶು ವೈದ್ಯಕೀಯ ಮತ್ತು ಪಶು ಸಂಗೋಪನೆ, ಕೃಷಿ ವಿಜ್ಞಾನ ಕೋರ್ಸ್‌ಗಳಿಗೆ ಪ್ರಾಕ್ಟಿಕಲ್ ರಾಂಕ್ ಪಡೆದಿರುವ ಅಭ್ಯರ್ಥಿಗಳು, ಪ್ರಾಕ್ಟಿಕಲ್ ಮತ್ತು ರೆಗ್ಯುಲರ್ ಸೀಟುಗಳಿಗೆ ಪ್ರತ್ಯೇಕವಾಗಿಯೇ ಆಪ್ಷನ್ಸ್ ದಾಖಲಿಸಬೇಕು . ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮತ್ತು ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ ಹಾಗೂ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆ ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳ ಪ್ರಕಾರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!