ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಹತ್ತಿ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಗುರಿ ಇಟ್ಟುಕೊಂಡು ಪ್ರಮುಖ ಕೃಷಿ ಸುಧಾರಣೆಯಲ್ಲಿ, ಕೇಂದ್ರ ಸರ್ಕಾರವು ವಿವಾದಾತ್ಮಕ ಕಳೆನಾಶಕ-ಸಹಿಷ್ಣು ಬಿಟಿಹತ್ತಿ (HtBt ಹತ್ತಿ)ಯನ್ನು ಕಾನೂನುಬದ್ಧಗೊಳಿಸಲು ಚಿಂತನೆ ನಡೆಸುತ್ತಿದೆ.
ಹೆಚ್ ಟಿಬಿಟಿ ಹತ್ತಿ ಬೀಜಗಳ ಬಗ್ಗೆ ಸಂಶೋಧನೆ ಅಧ್ಯಯನ ನಡೆಸುವ ತಜ್ಞರ ಸಮಿತಿಯು ಮೂರು ವರ್ಷಗಳ ಜೈವಿಕ ಸುರಕ್ಷತಾ ಅಂಕಿಅಂಶಗಳನ್ನು ವಿಶ್ಲೇಷಿಸಿದ ನಂತರ, ಅದರ ವಾಣಿಜ್ಯ ಕೃಷಿಗಾಗಿ ಉನ್ನತ ಜೈವಿಕ ಸುರಕ್ಷತಾ ನಿಯಂತ್ರಕ ಸಂಸ್ಥೆಯಾದ ಜೆನೆಟಿಕ್ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿಗೆ ಸಕಾರಾತ್ಮಕವಾಗಿ ಶಿಫಾರಸು ಮಾಡಿದೆ.
ಸಮಿತಿಯ ಈ ಅನುಮೋದನೆಯು ರೈತರು ಹತ್ತಿ ಬೆಳೆಗಳಿಗೆ ಹಾನಿಯಾಗದಂತೆ ಕಳೆಗಳನ್ನು ತೊಡೆದುಹಾಕಲು ಬಳಸುವ ವಿವಾದಾತ್ಮಕ ಕಳೆನಾಶಕವಾದ ಗ್ಲೈಫೋಸೇಟ್ ನ್ನು ವಿವೇಚನೆಯಿಲ್ಲದೆ ಸಿಂಪಡಿಸಲು ಕಾರಣವಾಗಬಹುದು ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದು ಪರಿಸರ ಮತ್ತು ಹತ್ತಿರದ ಹೊಲಗಳಲ್ಲಿ ಬೆಳೆಯುವ ಇತರ ಬೆಳೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎನ್ನುತ್ತಾರೆ.