ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯೆಮನ್‌ನಲ್ಲಿ ನಿಮಿಷಾ ಪ್ರಿಯಾಗೆ ಗಲ್ಲು ಶಿಕ್ಷೆ: ಕೊನೆಯ ಕ್ಷಣದಲ್ಲಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ
ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕೇರಳದ ಪಾಲಕ್ಕಾಡ್ ಮೂಲದ ನರ್ಸ್, 36 ವರ್ಷದ ನಿಮಿಷಾ ಪ್ರಿಯಾ ಅವರನ್ನು ಜುಲೈ 16 ರಂದು ಗಲ್ಲಿಗೇರಿಸಲಾಗುತ್ತಿದೆ.
ಇದರ ನಡುವೆ ಯೆಮೆನ್‌ನಲ್ಲಿ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ತಡೆಹಿಡಿಯಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಇದ್ದ ನ್ಯಾಯ ಪೀಠವು, ನಿಮಿಷಾ ಪ್ರಿಯಾ ಅರ್ಜಿ ವಿಚಾರಣೆಯನ್ನು ನಾಳೆ ನಡೆಸಲು ನಿರ್ಧರಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಜುಲೈ 14 ರಂದು ವಿಚಾರಣೆ ಮಾಡಲು ಒಪ್ಪಿಕೊಂಡಿತು. ಆದಾಗ್ಯೂ, ಹಿರಿಯ ವಕೀಲ ರಾಜೇಂತ್ ಬಸಂತ್ ಅವರು ಮರಣದಂಡನೆ ದಿನಾಂಕ ಜುಲೈ 16 ರಂದು ಇರುವುದರಿಂದ, ಭಾರತ ಸರ್ಕಾರದಿಂದ ರಾಜತಾಂತ್ರಿಕ ಮಾತುಕತೆಗಳಿಗೆ ಕೇವಲ ಎರಡು ದಿನಗಳು ಮಾತ್ರ ಉಳಿದಿವೆ, ಅದು ಪರಿಣಾಮಕಾರಿಯಾಗದಿರಬಹುದು ಎಂದು ಕೋರ್ಟ್‌ಗೆ ಮನವರಿಗೆ ಮಾಡಿಕೊಟ್ಟರು.
ಯೆಮೆನ್ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಿದ ನಿಮಿಷಾ ಪ್ರಿಯಾ 2014ರಲ್ಲಿ ಯೆಮೆನ್ ಪ್ರಜೆಯಾದ ತಲಾಲ್ ಅಬ್ದೋ ಮೆಹದಿ ಜತೆ ಸೇರಿ ತಮ್ಮದೇ ಕ್ಲಿನಿಕ್ ತೆರೆದಿದ್ದರು. ಅದೇ ವರ್ಷ ಅವರ ಪತಿ ಮತ್ತು ಮಗಳು ಹಣಕಾಸಿನ ಕಾರಣಗಳಿಂದಾಗಿ ಭಾರತಕ್ಕೆ ಮರಳಿದ್ದರು. ಇದೇ ವೇಳೆ ಯೆಮನ್‌ನಲ್ಲಿ ಅಂತರಿಕ ಯುದ್ಧ ಆರಂಭವಾಗಿದ್ದರಿಂದ ನಿಮಿಷಾಗೆ ಭಾರತಕ್ಕೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ. ತಮ್ಮದೇ ಕ್ಲಿನಿಕ್ ಆರಂಭಿಸಿದ ಕೆಲವು ಸಮಯದ ಬಳಿಕ ನಿಮಿಷಾ ಪ್ರಿಯಾ ಮತ್ತು ಮೆಹದಿ ಜತೆ ಮನಸ್ತಾಪ ಉಂಟಾಗಿತ್ತು. ಆತನ ವಿರುದ್ಧ ನಿಮಿಷಾ ದೂರು ಕೂಡ ದಾಖಲಿಸಿದ್ದರು. ಅದರಂತೆ 2016ರಲ್ಲಿ ಆತನನ್ನು ಬಂಧಿಸಲಾಯಿತು. ಜೈಲಿನಿಂದ ಬಿಡುಗಡೆಯಾದ ಬಳಿಕ ಆತ ಆಕೆಗೆ ಬೆದರಿಕೆ ಹಾಕುತ್ತಲೇ ಇದ್ದ ಎನ್ನಲಾಗಿದೆ.ಅಲ್ಲದೆ ಮೆಹದಿ ಆಕೆಯ ಪಾಸ್‌ಪೋರ್ಟ್ ವಶಕ್ಕೆ ಪಡೆದು ಕಿರುಕುಳ ನೀಡುತ್ತಿದ್ದ ಎಂದು ನಿಮಿಷಾ ಕುಟುಂಬಸ್ಥರು ಆರೋಪಿಸಿದ್ದಾರೆ. ಕಿರುಕುಳದಿಂದ ಬೇಸತ್ತು ನಿಮಿಷಾ ಮೆಹದಿಯಿಂದ ತನ್ನ ಪಾಸ್‌ಪೋರ್ಟ್ ಪಡೆಯಲು ಆತನಿಗೆ 2017ರಲ್ಲಿ ನಿದ್ದೆ ಬರುವ ಚುಚ್ಚುಮದ್ದು ನೀಡಿದ್ದರು. ಇದರ ಡೋಸ್ ಹೆಚ್ಚಾಗಿ ಆತ ಅಸುನೀಗಿದ್ದ. ಬಳಿಕ ಆತನ ಮೃತದೇಹವನ್ನು ಅಡಗಿಸಲು ಯತ್ನಿಸಿ, ದೇಶ ಬಿಡಲು ಮುಂದಾಗಿದ್ದ ನಿಮಿಷಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. 2018ರಲ್ಲಿ ಅವರ ಮೇಲೆ ಕೊಲೆ ಆರೋಪ ಹೊರಿಸಲಾಯಿತು. 2020ರಲ್ಲಿ ಯೆಮೆನ್ ವಿಚಾರಣಾ ನ್ಯಾಯಾಲಯವು ನಿಮಿಷಾಗೆ ಮರಣದಂಡನೆ ವಿಧಿಸಿತು. ದೇಶದ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ 2023ರಲ್ಲಿ ಈ ತೀರ್ಪನ್ನು ಎತ್ತಿ ಹಿಡಿಯಿತು.
ನಿಮಿಷಾ ಪ್ರಿಯಾ ಪ್ರಸ್ತುತ ಯೆಮೆನ್‌ನ ರಾಜಧಾನಿ ಸನಾದಲ್ಲಿರುವ ಜೈಲಿನಲ್ಲಿದ್ದಾರೆ.