ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ದಿಗ್ಗಜ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ಗೆ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಗುರುವಾರ ಭಾರತ ಹಾಗೂ ಇಂಗ್ಲೆಂಡ್ ತಂಡಗಳನ್ ನಡುವಣ ಮೂರನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಎಂಸಿಸಿ (Marylebone Cricket Club) ವತಿಯಿಂದ ವಿಶೇಷ ಗೌರವವನ್ನು ನೀಡಲಾಯಿತು.
ಪಂದ್ಯದ ಆರಂಭಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಲಾರ್ಡ್ಸ್ ಅಂಗಣದ ಐತಿಹಾಸಿಕ ಗಂಟೆಯನ್ನು ಐದು ನಿಮಿಷಗಳ ಕಾಲ ಬಾರಿಸಿದರು, ಆ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಸಚಿನ್ ಟೆಸ್ಟ್ ಪಂದ್ಯದಲ್ಲಿನ ತಮ್ಮ ಹಳೆಯ ಫೋಟೋವನ್ನು ಎಂಸಿಸಿ ಮ್ಯೂಸಿಯಂನಲ್ಲಿ ಅನಾವರಣಗೊಳಿಸಿದರು. ಈ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಎಂಸಿಸಿ ವತಿಯಿಂದ ತಮಗೆ ಲಭಿಸಿದ ವಿಶೇಷ ಗೌರವದ ಬಗ್ಗೆ ಪ್ರತಿಕ್ರಿಯಿಸಿದ ಸಚಿನ್ ತೆಂಡೂಲ್ಕರ್, 1988ರಲ್ಲಿ ತಾವು 15ನೇ ವಯಸ್ಸಿನಲ್ಲಿ ಮೊಟ್ಟ ಮೊದಲ ಬಾರಿ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಒಂದು ಸುತ್ತು ನಡೆದಿದ್ದ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.
ನಾನು ಮೊದಲು ಹದಿಹರೆಯದವನಾಗಿದ್ದಾಗ 1988ರಲ್ಲಿ ಲಾರ್ಡ್ಸ್‌ಗೆ ಭೇಟಿ ನೀಡಿದ್ದೆ ಮತ್ತು 1989 ರಲ್ಲಿ ಸ್ಟಾರ್ ಕ್ರಿಕೆಟ್ ಕ್ಲಬ್ ತಂಡದೊಂದಿಗೆ ಹಿಂತಿರುಗಿದೆ. ಪೆವಿಲಿಯನ್ ಬಳಿ ನಿಂತು ಇತಿಹಾಸದಲ್ಲಿ ಮುಳುಗಿ ಸದ್ದಿಲ್ಲದೆ ಕನಸು ಕಂಡಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಇಂದು(ಜುಲೈ 10) ಈ ಸ್ಥಳದಲ್ಲಿ ನನ್ನ ಭಾವಚಿತ್ರವನ್ನು ಅನಾವರಣಗೊಳಿಸುವುದನ್ನು ಪದಗಳಲ್ಲಿ ಹೇಳುವುದು ಕಷ್ಟಕರವಾದ ಭಾವನೆಯಾಗಿದೆ. ಜೀವನವು ನಿಜವಾಗಿಯೂ ಪೂರ್ಣ ವೃತ್ತಕ್ಕೆ ಬಂದಿದೆ. ನಾನು ಕೃತಜ್ಞನಾಗಿದ್ದೇನೆ ಮತ್ತು ಅದ್ಭುತ ನೆನಪುಗಳಿಂದ ತುಂಬಿದ್ದೇನೆ, ಎಂದು ಸಚಿನ್ ತೆಂಡೂಲ್ಕರ್ ತಮ್ಮ ಫೋಟೋಗಳಿಗೆ ಈ ರೀತಿಯ ಶೀರ್ಷಿಕೆಯನ್ನು ನೀಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ತಂಡಗಳು ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಆಡುತ್ತಿವೆ. ಇದನ್ನು ಸಚಿನ್ ಮತ್ತು ಇಂಗ್ಲೆಂಡ್ ಕ್ರಿಕೆಟ್ ದಂತಕಥೆ ಜೇಮ್ಸ್ ಆಂಡರ್ಸನ್ ಅವರ ಹೆಸರಿನಲ್ಲಿ ಇಡಲಾಗಿದೆ. ಈ ಇಬ್ಬರೂ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರಾಗಿದ್ದಾರೆ . ಏಕೆಂದರೆ ಸಚಿನ್ ಭಾರತಕ್ಕಾಗಿ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದರೆ, ಆಂಡರ್ಸನ್ ಇಂಗ್ಲೆಂಡ್ ಪರ 188 ರೆಡ್-ಬಾಲ್ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಎಂದು ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.