ಹೊಸದಿಗಂತ ಚಿತ್ರದುರ್ಗ:
ನಕಲಿ ಬಂಗಾರ ಕೊಟ್ಟು ಜನರನ್ನು ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ರಮೇಶ ಅಲಿಯಾಸ್ ಪರಶುರಾಮ ಮತ್ತು ರಾಮಕೃಷ್ಣ ಎಂದು ಗುರುತಿಸಲಾಗಿದೆ.
ಈ ಆರೋಪಿಗಳು ತಮ್ಮ ಜಮೀನಿನಲ್ಲಿ ಹೊಲ ಉಳುಮೆ ಮಾಡುವಾಗ ಬಂಗಾರದ ನಾಣ್ಯಗಳು ಸಿಕ್ಕಿವೆ ಅವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಜನರನ್ನು ನಂಬಿಸುತ್ತಿದ್ದರು. ಚಿತ್ರದುರ್ಗ ನಗರ ಹಾಗೂ ನಗರದ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಮೊದಲು ಒಂದೆರಡು ಅಸಲಿ ಚಿನ್ನದ ನಾಣ್ಯಗಳನ್ನು ನೀಡಿ ಜನರ ನಂಬಿಕೆ ಗಳಿಸುತ್ತಿದ್ದರು.
ಈ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರು ಜಿ.ಆರ್.ಹಳ್ಳಿ ಬಳಿ ಇರುವ ದಾವಣಗೆರೆ ವಿಶ್ವವಿದ್ಯಾಲಯದ ಬಳಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇವರನ್ನು ವಿಚಾರಣೆಗೆ ಒಳಪಡಿಸಿದಾಗ ತಮಿಳುನಾಡಿನ ಕೆ.ಪಾಂಡಿ ಅವರಿಗೆ ಶುದ್ಧ ಚಿನ್ನ ಎಂದು ನಂಬಿಸಿ ಸುಮಾರು ೨ ಕೆ.ಜಿ.ಯಷ್ಡು ನಕಲಿ ಚಿನ್ನ ನೀಡಿ ಕೆ.ಪಾಂಡಿ ಅವರಿಂದ ೩೫ ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಪೊಲೀಸರು ೨೨ ಲಕ್ಷ ರೂ. ನಗದು ಹಣ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ.