ಹೊಸದಿಗಂತ ಕಾರವಾರ
ಗುತ್ತಿಗೆದಾರನೋರ್ವನಿಂದ ವೈದ್ಯಕೀಯ ಆಸ್ಪತ್ರೆಗೆ ಸಾಮಗ್ರಿ ಪೂರೈಕೆ ಮಾಡಿರುದಕ್ಕೆ ಹಣ ಬಿಡುಗಡೆ ಮಾಡಲು ಲಂಚ ಪಡೆಯಲು ಮುಂದಾದ ಕಾರವಾರದ ವೈದ್ಯಕೀಯ ಅಧೀಕ್ಷಕ ಶಿವಾನಂದ ಕುಡ್ತಲಕರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆಯು ಗುರುವಾರ ಮಧ್ಯಾಹ್ನ ನಡೆದಿದೆ.
ಕಾರವಾರದ ವೈದ್ಯಕೀಯ ಆಸ್ಪತ್ರೆಗೆ ಅಂಕೋಲಾದ ಗುತ್ತಿಗೆದಾರ ಆಸ್ಪತ್ರೆಗೆ ಹಾಸಿಗೆ ಇತರೆ ಸಾಮಗ್ರಿಗಳ ನ್ನು ಪೂರೈಸಿದ್ದು ಅದರ ಬಿಲ್ ಪಾವತಿಗಾಗಿ 30 ಸಾವಿರ ರೂ.ಲಂಚ ಪಡೆಯುತ್ತಿರುವ ವೇಳೆ ಲೋಕಾಯುಕ್ತ ಎಸ್ಪಿತಂಡ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಅಂಕೋಲಾ ತಾಲೂಕಿನ ವಿಶಾಲ ಫರ್ನಿಚರ್ಸನ ಮೌಸೀನ ಅಹ್ಮದ್ ಶೇಖ್ ಸುಮಾರು ಮೂರುವರೆ ಲಕ್ಷರೂ. ವೆಚ್ಚದಲ್ಲಿ ಕ್ರಿಮ್ಸ ಆಸ್ಪತ್ರೆಗೆ ಬೆಡ್ ಮತ್ತಿತರ ಸಾಮಗ್ರಿ ಪೂರೈಕೆಯ ಟೆಂಡರ್ ಪಡೆದು ಸಾಮಗ್ರಿಯನ್ನು ಪೂರೈಕೆ ಮಾಡಿದ್ದರು. ಆದರೆ ಅದರ ಬಿಲ್ ಪಾವತಿಯಾಗದೆ ಕೆಲವು ದಿನಗಳು ಕಳೆದಿದ್ದವು. ಬಿಲ್ ಪಾವತಿಗಾಗಿ ಡಾ.ಶಿವಾನಂದ ಕುಡ್ತಲಕರ್ ಅವರು 50 ಸಾವಿರ ರೂ. ಲಂಚ ಕೇಳಿದ್ದರಂತೆ ಎರಡು ದಿನಗಳ ಹಿಂದೆ ಮೌಸೀನ ಅಹ್ಮದ್ ಶೇಖ್ 20 ಸಾವಿರ ರೂ.ಗಳನ್ನು ಕುಡ್ತಲಕರ್ ಗೆ ನೀಡಿದ್ದರು. ಉಳಿದ 30 ಸಾವಿರ ಮೊತ್ತವನ್ನು ಗುರುವಾರ ನೀಡುವದಾಗಿ ಹೇಳಿಇಂದು ಬಾಕಿ ಮೊತ್ತವನ್ನು ನೀಡುವ ಮುಂಚೆ ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದರು. ಅದರಂತೆ 30 ಸಾವಿರ ರೂ. ಹಣವನ್ನು ಅಧೀಕ್ಷಕ ಡಾ.ಶಿವಾನಂದ ಕುಡ್ತಲಕರ್ ಅವರಿಗೆ ನೀಡುತ್ತಿರುವಾಗ ಲೋಕಾಯುಕ್ತ ಎಸ್ಪಿಕುಮಾರ ಚಂದ್ರ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ದಾಗ ರೆಡ್ ಹ್ಯಾಂಡ್ ಆಗಿ ಅವರ ಬಲೆಗೆ ಬಿದ್ದಿದ್ದಾರೆ.
ಈ ಹಿಂದೆ ಮೌಸೀನ ಶೇಖ್ ಅವರು 2014 ರಲ್ಲಿ ಸುಮಾರು 16 ಲಕ್ಷರೂ.ಟೆಂಡರ್ ಪಡೆದಾಗ ಲಕ್ಷ ರೂ.ಗಳ ಲಂಚದ ಹಣವನ್ನು ಡಾ.ಶಿವಾನಂದ ಕುಡ್ತಲಕರ್ ಅವರಿಗೆ ನೀಡಿದ್ದರು ಎನ್ನುವದು ಕೇಳೀಬಂದಿದೆ.
ಲೋಕಾಯುಕ್ತರು ಲಂಚ ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.