ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಮಿಡಿಯನ್ ಕಪಿಲ್ ಶರ್ಮಾ ಮಾಲೀಕತ್ವದ ಕೆಫೆ (café) ಮೇಲೆ ಗುಂಡಿನ ದಾಳಿ ನಡೆದಿದೆ.
ಕೆನಡಾದ ಬ್ರಿಟಿಷ್ ಕೋಲಂಬಿಯಾದ ಪ್ರದೇಶದಲ್ಲಿರುವ ಸರ್ರೆಯಲ್ಲಿ ಇತ್ತೀಚಿಗಷ್ಟೇ ಕಪಿಲ್ ಶರ್ಮಾ ಮಾಲೀಕತ್ವದ ಕೆಫೆ ಉದ್ಘಾಟನೆಯಾಗಿತ್ತು. KAP’S CAFÉ ಹೆಸರಿನ ಈ ರೆಸ್ಟೋರೆಂಟ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಆದರೆ ಇಲ್ಲಿಯವರೆಗೆ ಯಾರಿಗೂ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಸ್ಥಳೀಯ ಪೊಲೀಸರು ತಕ್ಷಣ ಪ್ರದೇಶವನ್ನು ಸುತ್ತುವರೆದು ಗುಂಡಿನ ದಾಳಿಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಕಪಿಲ್ ಶರ್ಮಾ ಶೋ ಖ್ಯಾತಿಯ ಖ್ಯಾತ ಕಾಮೆಡಿಯನ್ ಕಪಿಲ್ ಶರ್ಮಾ ತಮ್ಮ ಪತ್ನಿ ಗಿನ್ನಿ ಜೊತೆಗೂಡಿ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರದೇಶದ ಸರ್ರೆ ಎಂಬಲ್ಲಿ ಇತ್ತೀಚಿಗಷ್ಟೇ ಕಪಿಲ್ ದಿ ಕ್ಯಾಪ್ಸ್ ಕೆಫೆ ಎಂಬ ಹೆಸರಿನ ರೆಸ್ಟೋರೆಂಟ್ ಅನ್ನು ತೆರೆದಿದ್ದರು.
ಕೆಫೆ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದಂತೆ ಕೆನಡಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳೀಯ ಪೊಲೀಸರು ಕೆಫೆಯ ಹೊರಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.. ವಿಧಿವಿಜ್ಞಾನ ತಂಡವು ಸ್ಥಳದಿಂದ ಬುಲೆಟ್ ಶೆಲ್‌ಗಳನ್ನು ವಶಪಡಿಸಿಕೊಂಡಿದೆ. ಈ ಘಟನೆಯು ಉದ್ದೇಶಪೂರ್ವಕವಾಗಿ ಮಾಡಲಾಗಿದೆಯೇ ಅಥವಾ ಕೆಲವು ಗ್ಯಾಂಗ್ ವಾರ್ ಅಥವಾ ವೈಯಕ್ತಿಕ ದ್ವೇಷದ ಪರಿಣಾಮವೇ ಎಂಬ ಅಂಶವನ್ನು ಸಹ ತನಿಖೆ ಮಾಡಲಾಗುತ್ತಿದೆ.
ಇದು ಉದ್ದೇಶಿತ ದಾಳಿಯೇ ಅಥವಾ ಬೆದರಿಕೆ ಹಾಕಲು ದಾಳಿ ಮಾಡಿದರೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ದಾಳಿಯ ಹೊಣೆಯನ್ನು ಬಬ್ಬರ್ ಖಾಲ್ಸಾ ಸಂಘಟನೆ ಹೊತ್ತುಕೊಂಡಿದೆ. ಇದು ಭಾರತದ ತನಿಖಾ ಸಂಸ್ಥೆ ಎನ್ಐಎ ಮೋಸ್ಟ್ ವಾಂಟೆಡ್ ಉಗ್ರ ಬಬ್ಬರ್ ಖಾಲ್ಸಾ ಸಂಘಟನೆಯ ಹರ್ಜಿತ್ ಸಿಂಗ್ ಲಡ್ಡಿ ಹೊಣೆ ಹೊತ್ತುಕೊಂಡಿದ್ದಾರೆ.
ಇನ್ನು ಕಪಿಲ್ ಶರ್ಮಾ ಕೂಡ ಈ ವಿಷಯದ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ.