ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲಬುರಗಿಯ ದತ್ತಾತ್ರೇಯ ಸನ್ನಿಧಿಯಲ್ಲಿ ಗುರುಪೂರ್ಣಿಮೆಯಂದು ನೂಕುನುಗ್ಗಲು ಉಂಟಾಗಿದ್ದು, ಮಹಿಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಕಲಾವತಿ ಮೃತ ಮಹಿಳೆ. ಮೊದಲಿಗೆ ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ ಅಂತಾ ಹೇಳಲಾಗಿತ್ತು. ಆದರೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರದಂದು ಎಲ್ಲೆಡೆ ಗುರುಪೂರ್ಣಿಮೆ ಸಂಭ್ರಮ. ಗುರುವನ್ನ ಆರಾಧಿಸುವ ದಿನ. ಹಾಗಾಗಿ ಕಲಬುರಗಿ ಜಿಲ್ಲೆಯ ಗಾಣಗಾಪುರದ ದತ್ತಾತ್ರೇಯ ದೇಗುಲಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ರಾಜ್ಯ ಮಾತ್ರವಲ್ಲದೆ ನೆರೆಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿದ್ದರು. ಜನ ಹೆಚ್ಚಾಗುತ್ತಿದ್ದಂತೆ ಸಂಜೆಯ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿದೆ.
ಈ ನೂಕುನುಗ್ಗಲು ನಡುವೆ ಸಂಜೆ 5.30 ವೇಳೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋಕುಲ ಗ್ರಾಮದ ಕಲಾವತಿ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಅವರನ್ನು ರವಾನಿಸಲಾಗಿದೆ. ಆದರೆ ಕಲಾವತಿ ಅವರು ಬದುಕುಳಿಯಲೇ ಇಲ್ಲ. ಇನ್ನು ಕಾಲ್ತುಳಿತದಿಂದಾಗಿ ಮಹಿಳೆ ಮೃತಪಟ್ಟಿದ್ದಾರೆ ಅಂತಾ ಹೇಳಲಾಗಿತ್ತು. ಆದರೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.