ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಸಿಲುಕಿರುವ ನಟ ದರ್ಶನ್ ತೂಗುದೀಪಗೆ ಮತ್ತೊಂದು ಸಮಸ್ಯೆ ಎದುರಾಗಿದ್ದು, ತಮ್ಮ ಬಹು ನಿರೀಕ್ಷಿತ ‘ಡೆವಿಲ್’ ಚಿತ್ರದ ಚಿತ್ರೀಕರಣಕ್ಕೆ ಭಾರೀ ತೊಂದರೆ ಉಂಟಾಗಿದೆ. ಯುರೋಪ್ನ ಸ್ವಿಟ್ಜರ್ಲೆಂಡ್ಗೆ ಚಿತ್ರೀಕರಣಕ್ಕಾಗಿ ದರ್ಶನ್ ವೀಸಾ ಕೋರಿ ಸಲ್ಲಿಸಿದ ಅರ್ಜಿಯನ್ನು ಸ್ಥಳೀಯ ಅಧಿಕಾರಿಗಳು ತಿರಸ್ಕರಿಸಿರುವುದು ಅವರ ಚಿತ್ರತಂಡಕ್ಕೆ ನಿರಾಸೆ ತಂದಿದೆ.
ದುಬೈ ಮತ್ತು ಯುರೋಪ್ನಲ್ಲಿ ‘ಡೆವಿಲ್’ ಚಿತ್ರದ ಶೂಟಿಂಗ್ ಪ್ಲಾನ್ ಮಾಡಲಾಗಿದ್ದರೂ, ಇಸ್ರೇಲ್ನಲ್ಲಿ ಉಂಟಾದ ಭದ್ರತಾ ಕಳವಳದಿಂದಾಗಿ ಚಿತ್ರತಂಡ ತಕ್ಷಣದ ತೀರ್ಮಾನವಾಗಿ ಯುರೋಪ್ ಬದಲು ಥಾಯ್ಲೆಂಡ್ಗೆ ಶೂಟಿಂಗ್ ಸ್ಥಳಾಂತರಿಸಿತು. ಆದರೆ, ದರ್ಶನ್ನ ಮೇಲಿನ ಕೊಲೆ ಆರೋಪದ ಹಿನ್ನೆಲೆಯಲ್ಲಿ ಸ್ವಿಟ್ಜರ್ಲೆಂಡ್ ಅಧಿಕಾರಿಗಳು ವೀಸಾ ನಿರಾಕರಿಸಿದರು. ಇದು ದರ್ಶನ್ರ ವೈಯಕ್ತಿಕ ಕನಸು ಮಾತ್ರವಲ್ಲ, ಚಿತ್ರೀಕರಣಕ್ಕೂ ತೊಂದರೆ ತಂದಿದೆ.
ದರ್ಶನ್ ಮತ್ತು ಅವರ ಕಾನೂನು ತಂಡ ಜುಲೈ 11ರಿಂದ 30ರವರೆಗೆ ಥಾಯ್ಲೆಂಡ್ನ ಪುಕೆಟ್ಗೆ ಚಿತ್ರೀಕರಣ ಪ್ರಯಾಣಕ್ಕೆ ಅನುಮತಿ ಕೋರಿ ಬೆಂಗಳೂರು 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ದರ್ಶನ್ಗೆ ಥಾಯ್ಲೆಂಡ್ಗೆ ಹೋಗಲು ಅವಕಾಶ ನೀಡಿದರೂ, ಪ್ರಯಾಣದ ದಿನಾಂಕ, ಸ್ಥಳ ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಲ್ಲಿಸುವಂತಹ ಷರತ್ತುಗಳನ್ನು ವಿಧಿಸಿದೆ.
ದರ್ಶನ್ರ ಪರವಾಗಿ ವಕೀಲರು ಕೋರ್ಟ್ಗೆ ಸಲ್ಲಿಸಿದ ಮನವಿಯಲ್ಲಿ, ಚಿತ್ರೀಕರಣ ಮತ್ತು ವಿದೇಶ ಪ್ರಯಾಣ ಆತನ ವೃತ್ತಿ ಮತ್ತು ಕುಟುಂಬದ ಜೀವನಾಧಾರಕ್ಕೆ ಅತ್ಯಗತ್ಯವಾಗಿದೆ ಎಂದು ವಿವರಿಸಲಾಗಿದೆ. ಇದರ ಪರಿಶೀಲನೆಯ ನಂತರ ಕೋರ್ಟ್ ಥಾಯ್ಲೆಂಡ್ ಪ್ರಯಾಣಕ್ಕೆ ಶರತ್ತಿನೊಡನೆ ಅನುಮತಿ ನೀಡಿದೆ.
ಸ್ವಿಟ್ಜರ್ಲೆಂಡ್ ವೀಸಾ ನಿರಾಕರಣೆ ದರ್ಶನ್ ಚಿತ್ರತಂಡಕ್ಕೆ ತೊಂದರೆಯಾದರೂ, ಕೋರ್ಟ್ ನೀಡಿದ ಥಾಯ್ಲೆಂಡ್ ಅನುಮತಿ ಅವರ ಸಿನಿಮಾ ಚಟುವಟಿಕೆಗೆ ತಾತ್ಕಾಲಿಕ ಪರಿಹಾರ ನೀಡಿದೆ. ದರ್ಶನ್ ಈಗ ಫುಕೆಟ್ ನಲ್ಲಿ ‘ಡೆವಿಲ್’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ.