ನಾವು ಬೆಳಿಗ್ಗೆ ಎದ್ದ ತಕ್ಷಣ ಏನನ್ನು ನೋಡುತ್ತೇವೆ, ಏನನ್ನು ಅನುಭವಿಸುತ್ತೇವೆ ಎಂಬುದು ನಮ್ಮ ಆಲೋಚನೆಗಳಿಗೆ, ಮನೋಭಾವನೆಗೆ ಮತ್ತು ದೈನಂದಿನ ಕಾರ್ಯಕ್ಷಮತೆಗೆ ಸಾಕಷ್ಟು ಪ್ರಭಾವ ಬೀರುತ್ತದೆ. ಹಾಗಾಗಿ, ಶಾಸ್ತ್ರಗಳು ಬೆಳಗಿನ ಸಮಯದಲ್ಲಿ ಕೆಲವೊಂದು ವಸ್ತುಗಳ ದರ್ಶನವನ್ನು ಶುಭವೆಂದು ಪರಿಗಣಿಸುತ್ತೇವೆ. ಇವುಗಳು ನಿಮ್ಮ ದಿನವಿಡೀ ಪಾಸಿಟಿವ್ ಎನರ್ಜಿ, ಸಂತೋಷ ಹಾಗೂ ನೆಮ್ಮದಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯಿದೆ.
ಅಂಗೈ ದರ್ಶನ – ಪವಿತ್ರ ಮಂತ್ರದೊಂದಿಗೆ ಶುಭಾರಂಭ
ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಕೈಗಳನ್ನು ತೋರಿಸಿ ನೋಡುವುದು ಶಾಸ್ತ್ರದಲ್ಲಿ ಬಹುಶ್ರದ್ಧೆಯ ವಿಚಾರವಾಗಿದೆ. “ಕರಾಗ್ರೆ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ | ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಮ್॥” ಎಂಬ ಮಂತ್ರವನ್ನು ಜಪಿಸಿ ಅಂಗೈ ನೋಡುವುದು ಶುಭ ಸೂಚಕ. ಇದು ಕಾರ್ಯಸಿದ್ಧಿಗೆ ಸಹಾಯ ಮಾಡುತ್ತದೆ ಎಂದು ನಂಬಲಾಗುತ್ತದೆ.
ದೇವರ ದರ್ಶನ – ನೆಮ್ಮದಿಯ ಸಂಕೇತ
ದೇವರ ವಿಗ್ರಹ ಅಥವಾ ಚಿತ್ರವನ್ನು ಬೆಳಗಿನ ಜಾವ ನೋಡುವುದು ಬಹಳ ಶ್ರೇಷ್ಠ ಎಂದು ಶಾಸ್ತ್ರದಲ್ಲಿ ಹೇಳಲಾಗಿದ್ದು, ಇದು ಮನಸ್ಸಿಗೆ ಶಾಂತಿ ಮತ್ತು ಭಯದಿಂದ ಮುಕ್ತತೆ ನೀಡುತ್ತದೆ. ದೇವರನ್ನು ನೋಡುವುದರಿಂದ ಆತ್ಮಬಲ ಹೆಚ್ಚುತ್ತದೆ.
ಸೂರ್ಯೋದಯ – ಶಕ್ತಿ ಮತ್ತು ಪಾಸಿಟಿವಿಟಿ
ಸೂರ್ಯನ ದರ್ಶನ ಅಥವಾ ಸೂರ್ಯೋದಯವನ್ನು ನೋಡುವುದು ಪ್ರಾಣಶಕ್ತಿಯನ್ನು ನೀಡುತ್ತದೆ. ಇದು ನವಚೈತನ್ಯಕ್ಕೆ, ದೇಹದ ನಿಗಧಿತ ಚಕ್ರಗಳಿಗೆ ಶಕ್ತಿಯನ್ನು ಪೂರೈಸುತ್ತದೆ ಎಂಬ ನಂಬಿಕೆಯಿದೆ.
ಹಸು ದರ್ಶನ – ಪವಿತ್ರತೆಯ ಪ್ರತೀಕ
ಹಸು, ಅದರಲ್ಲೂ ಬಿಳಿ ಬಣ್ಣದ ಹಸುವನ್ನು ನೋಡಿದರೆ ಅದು ಶ್ರೇಯಸ್ಸಿಗೆ ಕಾರಣವಾಗುತ್ತದೆ. ಶುದ್ಧತೆಯ, ಸಮೃದ್ಧಿಯ ಸಂಕೇತವಾದ ಹಸು, ದಿನದ ಆರಂಭದಲ್ಲಿ ಸಕಾರಾತ್ಮಕ ಶಕ್ತಿ ನೀಡುತ್ತದೆ.
ಹೂವುಗಳು ಮತ್ತು ಹಸಿರು ಗಿಡಗಳು – ಪ್ರಕೃತಿಯ ಶಾಂತಿ
ಬೆಳಿಗ್ಗೆ ಹೂವು, ಗಿಡಮರಗಳ ಸೌಂದರ್ಯವನ್ನು ನೋಡುವುದು ಮನಸ್ಸಿಗೆ ಸಂತೋಷ, ಚೈತನ್ಯ ಉಂಟುಮಾಡುತ್ತದೆ. ಹಸಿರು ಪ್ರಕೃತಿಯ ವೀಕ್ಷಣೆ ದೈನಂದಿನ ಒತ್ತಡವನ್ನು ತಗ್ಗಿಸಲು ಸಹಕಾರಿ.
ನೀರು ಅಥವಾ ಜಲಪಾತ – ಮನಸ್ಸಿಗೆ ಶೀತಲತೆ
ನೀರು ಅಥವಾ ಜಲಧಾರೆಗಳ ಚಿತ್ರ, ಕಲಾಕೃತಿಗಳನ್ನು ನೋಡುವುದು ಅಥವಾ ತಾಜಾ ನೀರಿನ ದರ್ಶನವೂ ಸಹ ಮನಃಶಾಂತಿ ನೀಡುತ್ತದೆ. ನೀರು ಶುದ್ಧತೆಯ ಹಾಗೂ ಶುದ್ಧ ಚಿಂತನೆಗಳ ಪ್ರತೀಕವಾಗಿದೆ.
ಪಕ್ಷಿ ವೀಕ್ಷಣೆ – ಪ್ರಕೃತಿಯ ಪ್ರೇರಣೆ
ಮನೆಯ ಬಾಗಿಲಿಗೆ ಬರುವ ಪಕ್ಷಿಗಳನ್ನು ನೋಡಿದರೆ ಮನಸ್ಸಿಗೆ ಸಂತೋಷವಾಗುತ್ತದೆ. ವಿಶೇಷವಾಗಿ ನವಿಲು, ಗುಬ್ಬಿ, ಪಾರಿವಾಳ ಇತ್ಯಾದಿ ಹಕ್ಕಿಗಳ ವೀಕ್ಷಣೆ ಪಾಸಿಟಿವ್ ಎನರ್ಜಿ ನೀಡುತ್ತದೆ.
ಈ ನಿತ್ಯದ ಪದ್ಧತಿಗಳು ಮಾನಸಿಕ, ಆತ್ಮಿಕ ಶಾಂತಿಗೆ ನೆರವಾಗುತ್ತವೆ. ದಿನದ ಆರಂಭ ಪಾಸಿಟಿವ್ ಆಗಿದ್ದರೆ, ಅದು ಇಡೀ ದಿನದ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂಬುದು ಅಂತಿಮ ಸತ್ಯ. ಆದ್ದರಿಂದ, ನಿಮ್ಮ ದಿನವನ್ನು ಧನಾತ್ಮಕವಾಗಿ ಆರಂಭಿಸಲು ಈ ವಿಧಾನಗಳನ್ನು ಪ್ರಯೋಗಿಸಿ.