ಹೊಸದಿಗಂತ ವರದಿ ವಿಜಯನಗರ:
ಜೆನ್ನಿ ಮಿಲ್ಕ್ ಹೆಸರಲ್ಲಿ ಅಮಾಯಕ ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣಕ್ಕೆ ಸಂಬಂದಿಸಿ ಸಿಐಡಿ ಪೊಲೀಸರು 1766 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಡಿಎಸ್ಪಿ ಅಸ್ಲಂಪಾಶಾ ನೇತೃತ್ವದಲ್ಲಿ ಸಿಐಡಿ ಅಧಿಕಾರಿಗಳು ಹೊಸಪೇಟೆಯ ಪ್ರಥಮ ದರ್ಜೆ ಸಿವಿಲ್ ನ್ಯಾಯಾಲಯಕ್ಕೆ ಗುರುವಾರ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಜೆನ್ನಿ ಮಿಲ್ಕ್ ಕಂಪನಿಯ ಎಂ.ಡಿ ನೂತಲಪಾಟಿ ಮುರಳಿ, ಕಂಪನಿಯ ವ್ಯವಸ್ಥಾಪಕ ಉಮಾಶಂಕರ್ ರೆಡ್ಡಿ, ಸೂಪರ್ವೈಸರ್ ಸೈಯದ್ ಮಹಮ್ಮದ್ ಗೌಸ್, ಹರ್ಷವರ್ಧನ ರಾಜು ಮತ್ತು ಗುರ್ರಂ ಯೋಗಾನಂದ ರೆಡ್ಡಿ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳ ವಿರುದ್ಧ ಸಿಐಡಿ ಅಧಿಕಾರಿಗಳು 1766 ಪುಟಗಳ ವಿವರವಾದ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ.
ಜೆನ್ನಿ ಮಿಲ್ಕ್ (ಕತ್ತೆ ಹಾಲು) ಹೆಸರಲ್ಲಿ ರಾಜ್ಯಾದ್ಯಂತ ರೈತರಿಗೆ ಕತ್ತೆಗಳನ್ನು ಮಾರಾಟ ಮಾಡಿ, ನೂರಾರು ಜನ ರೈತರಿಗೆ ವಂಚಿಸಿದ್ದರಿಂದ ಪ್ರಕರಣ ರಾಜ್ಯದ ಗಮನ ಸೆಳೆದಿತ್ತು. ಈ ಕುರಿತು ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಮಾರು 13 ಕೋಟಿ ರೂ. ವಂಚನೆಯಾಗಿರುವ ಬಗ್ಗೆ ಅಂದಾಜಿಸಿದ್ದರಿಂದ ಪ್ರಕರಣದ ತನಿಖೆಯನ್ನು ಸಿಐಟಿಗೆ ವಹಿಸಲಾಗಿತ್ತು. ಕಳೆದ 6 ತಿಂಗಳಿಂದ ವಂಚನೆ ಪ್ರಕರಣವನ್ನು ಜಾಲಾಡಿರುವ ಸಿಐಡಿ ಅಧಿಕಾರಿಗಳು ಇದೀಗ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಮುಂದಿನವಾರ ನಡೆಯಲಿರುವ ರಾಷ್ಟ್ರೀಯ ಲೋಕಾದಾಲತ್ ಬಳಿಕ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾದ್ಯತೆಯಿದೆ ಎಂದು ತಿಳಿದು ಬಂದಿದೆ.