ದಿಗಂತ ವರದಿ ವಿಜಯಪುರ:
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿಯ ಕೆನರಾ ಬ್ಯಾಂಕ್ ನಲ್ಲಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 12 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಚೇತನ್ ಸಿಂಗ್ ರಾಠೋಡ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳಾದ ಬಾಲರಾಜ್ ಮಣಿಕಮ್ ಯರೆಕುಲಾ, ಚಂದನರಾಜ್ ಪಿಳ್ಳೈ, ಗುಂಡು ಜೋಸೆಫ್ ಶ್ಯಾಮಬಾಬು, ಪೀಟರ್ ಚಂದ್ರಪಾಲ್, ಇಜಾಜ್ ಧಾರವಾಡ, ಸುಸೈರಾಜ್ ಡ್ಯಾನಿಯಲ್, ಬಾಬುರಾವ್ ಮಿರಿಯಾಲ್, ಮಹಮ್ಮದ್ ಆಸೀಫ್ ಕಲ್ಲೂರ, ಅನಿಲ್ ಮಿರಿಯಾಲ್, ಮೋಹನಕುಮಾರ, ಸುಲೇಮನ್‌ವೇಸ್ಲಿ ಪಲುಕುರಿ, ಮರಿಯಾದಾಸ ಗೋನಾ ಬಂಧಿತ ಆರೋಪಿಗಳಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಇಲ್ಲಿಯ ವರೆಗೆ 15 ಜನರ ಆರೋಪಿಗಳ ಬಂಧನವಾಗಿದೆ. ಎಲ್ಲರೂ ಹುಬ್ಬಳ್ಳಿ ಮೂಲದವರಾಗಿದ್ದಾರೆ ಎಂದರು.
ಈ ಬ್ಯಾಂಕ್ ನಲ್ಲಿ 53.26 ಕೋಟಿ ರೂ. ಮೌಲ್ಯದ 58.97 ಕೆಜಿ (58,976.94 ಗ್ರಾಂ) ಚಿನ್ನಾಭರಣ ಕಳ್ಳತನವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮೂವರು ಆರೋಪಿಗಳ ಬಂಧನ ಮಾಡಲಾಗಿತ್ತು. ಇದೀಗ್ ಬಂಧಿತ ಆರೋಪಿಗಳಿಂದ 39 ಕೆಜಿ ಗಟ್ಟಿ ಬಂಗಾರ, 1.16 ಕೋಟಿ ನಗದು, ಕೃತ್ಯಕ್ಕೆ ಬಳಸಿದ ವಾಹನಗಳು ಸೇರಿದಂತೆ 39.26 ಕೋಟಿ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದರು.
ಎಸ್ಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.