ಈ ಜಿಲ್ಲೆಯ ಜನರ ದಶಕಗಳ ಕನಸು ನನಸು: ಈ ಊರಿನಿಂದಲೂ ತಿರುಪತಿಯತ್ತ ಹೊರಟಿತು ರೈಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಮಗಳೂರು ತಿರುಪತಿ ರೈಲಿಗೆ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಇಂದು ಚಾಲನೆ ನೀಡಿದರು. ಈ ಮೂಲಕ ಜಿಲ್ಲೆಯ ಜನರ ದಶಕಗಳ ಕನಸು ಇಂದು ನನಸಾಗಿದೆ.

ಚಿಕ್ಕಮಗಳೂರು ರೈಲ್ವೆ ನಿಲ್ದಾಣದಲ್ಲಿ ಸೋಮಣ್ಣ ಹಸಿರು ನಿಶಾನೆ ತೋರುವ ಮೂಲಕ ರೈಲಿಗೆ ಚಾಲನೆ ನೀಡಿದರು.

ಈ ವೇಳೆ ಶಾಸಕ ಟಿ.ಡಿ. ರಾಜೇಗೌಡ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಪಶ್ಚಿಮ ರೈಲ್ವೆಯ ಹಿರಿಯ ಅಧಿಕಾರಿಗಳಾದ ಮೈಸೂರು ವಿಭಾಗದ ಡಿಆರ್‌ಎಂ ಶಿಲ್ಪಿ ಅಗರ್ವಾಲ್, ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಇಂದಿನಿಂದ ಆರಂಭವಾಗಿರುವ ನೂತನ ರೈಲು ಸೇವೆಯು ಕರ್ನಾಟಕದ ಚಿಕ್ಕಮಗಳೂರು, ತುಮಕೂರು, ಬೆಂಗಳೂರು, ಮತ್ತು ಕೋಲಾರ ಪ್ರದೇಶಗಳ ಜನರಿಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಸುಗಮ ಸಂಪರ್ಕವನ್ನು ಒದಗಿಸಲಿದೆ. ಈ ಐತಿಹಾಸಿಕ ಕ್ಷಣವು ಮಲೆನಾಡಿನ ಜನರಿಗೆ ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣದ ಆಯ್ಕೆಯನ್ನು ತಂದಿದೆ.

ಚಿಕ್ಕಮಗಳೂರು-ತಿರುಪತಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿಗೆ ಇಂದು ಚಾಲನೆ ಸಿಕ್ಕಿದೆ. ಈ ರೈಲು 581 ಕಿಮೀ ದೂರವನ್ನು ಸುಮಾರು 13-14 ಗಂಟೆಗಳಲ್ಲಿ ಕ್ರಮಿಸಲಿದ್ದು, 18 ಕೋಚ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಎರಡು ಎಸಿ ಟೂ-ಟೈರ್, ನಾಲ್ಕು ಎಸಿ ಥ್ರೀ-ಟೈರ್, ಆರು ಸ್ಲೀಪರ್ ಕ್ಲಾಸ್, ನಾಲ್ಕು ಜನರಲ್ ಸೆಕೆಂಡ್ ಕ್ಲಾಸ್, ಒಂದು ದಿವ್ಯಾಂಗರಿಗೆ ಮೀಸಲಾದ ಕಂಪಾರ್ಟ್‌ಮೆಂಟ್‌ನೊಂದಿಗೆ ಲಗೇಜ್ ಮತ್ತು ಬ್ರೇಕ್ ವ್ಯಾನ್, ಮತ್ತು ಒಂದು ಲಗೇಜ್/ಜನರೇಟರ್/ಬ್ರೇಕ್ ವ್ಯಾನ್ ಕೋಚ್ ಒಳಗೊಂಡಿವೆ.

ರೈಲು ಮಾರ್ಗದಲ್ಲಿ ಪಕ್ಕಾಲ, ಚಿತ್ತೂರು, ಕಾಟ್ಪಾಡಿ, ಜೋಲಾರ್‌ಪೇಟೆ, ಕುಪ್ಪಂ, ಬಂಗಾರಪೇಟೆ, ವೈಟ್‌ಫೀಲ್ಡ್, ಕೃಷ್ಣರಾಜಪುರಂ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVB) ಬೆಂಗಳೂರು, ಚಿಕ್ಕಬಾಣಾವಾರ, ತುಮಕೂರು, ತಿಪಟೂರು, ಅರಸೀಕೆರೆ, ದೇವನೂರು, ಬೀರೂರು, ಕಡೂರು, ಬಿಸಲೆಹಳ್ಳಿ, ಮತ್ತು ಸಕರಾಯಪಟ್ಟಣ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಯಾಗಲಿದೆ. ಈ ನಿಲ್ದಾಣಗಳು ಮಲೆನಾಡು, ತುಮಕೂರು, ಬೆಂಗಳೂರು, ಮತ್ತು ಕೋಲಾರದ ಭಕ್ತರಿಗೆ ಸುಲಭವಾಗಿ ತಿರುಪತಿಗೆ ತಲುಪಲು ಅನುಕೂಲ ಕಲ್ಪಿಸಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!