ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಶಿತರೂರ್ ಅವರು ಕಾಂಗ್ರೆಸ್ ನಲ್ಲಿ ಉಸಿರು ಬಿಗಿದ ವಾತಾವರಣದಲ್ಲಿದ್ದೇನೆ ಎಂದು ಭಾವಿಸಿದರೆ, ಅವರು ಸ್ಪಷ್ಟವಾದ ರಾಜಕೀಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹಿರಿಯ ಕಾಂಗ್ರೆಸ್ ನಾಯಕ ಕೆ ಮುರುಳೀಧರನ್ ಹೇಳಿದ್ದಾರೆ.
ಕೇರಳ ಕಾಂಗ್ರೆಸ್ ಘಟಕ ಮತ್ತೆ ಕಿಡಿಕಾರಿದ್ದು, ತರೂರ್ ಅವರ ಕ್ರಮಗಳು ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡುತ್ತಿದೆ ಹಾಗೂ ಪಕ್ಷವನ್ನು ಸಂಕಷ್ಟಕ್ಕೆ ಈಡು ಮಾಡುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ತುರ್ತು ಪರಿಸ್ಥಿತಿ ಸಮಯದಲ್ಲಿ ಇಂದಿರಾಗಾಂಧಿ ಕ್ರಮದ ಕುರಿತು ತರೂರ್ ಟೀಕಿಸಿದ ಬೆನ್ನಲ್ಲೇ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಲಾಗುತ್ತಿದೆ. ಅವರ ಮುಂದೆ ಎರಡು ಆಯ್ಕೆಗಳಿವೆ. ತರೂರ್ ಸದ್ಯ ಸಂಸತ್ನಲ್ಲಿ ಮತ್ತು ಪಕ್ಷದಲ್ಲಿ ಎರಡು ಪಾತ್ರ ನಿರ್ವಹಿಸುತ್ತಿದ್ದಾರೆ. ಇವುಗಳಲ್ಲಿ ಮುಂದುವರೆಯುವ ಆಯ್ಕೆ ಅವರ ಮುಂದೆ ಇದೆ ಎಂದು ಮುರಳಿಧರನ್ ಹೇಳಿದ್ದಾರೆ.
ಅವರಿಗೆ ಪಕ್ಷದಲ್ಲಿ ವಿಭಿನ್ನ ಅಭಿಪ್ರಾಯವಿದ್ದರೆ, ಅವರ ಮಾತಿಗೆ ಪಕ್ಷದಲ್ಲಿ ಸದಾ ಜಾಗವಿದೆ. ಆದರೆ, ಅವರಿಗೆ ಪಕ್ಷದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದರೆ, ಅವರು ಕೆಳಗಿಳಿದು, ತಮ್ಮ ರಾಜಕೀಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.
ಒಂದೊಮ್ಮೆ ತರೂರ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರೆ, ಅವರು ಪಕ್ಷದ ಚೌಕಟ್ಟಿನಲ್ಲಿ ಅದನ್ನು ವ್ಯಕ್ತಪಡಿಸಬಹುದು. ಆದರೆ, ಅವರಿಗೆ ಸದ್ಯದ ಪರಿಸ್ಥಿತಿ ಉಸಿರುಗಟ್ಟುತ್ತಿದೆ. ಅವರಿಗೆ ಮುಂದುವರೆಯಲು ಸಾಧ್ಯವಿಲ್ಲ ಎಂದರೆ, ಅವರು ಪಕ್ಷದ ಸ್ಥಾನಗಳಿಂದ ಕೆಳಗಿಳಿದು, ತಮಗೆ ಇಷ್ಟವಾದ ರಾಜಕೀಯ ಮಾರ್ಗವನ್ನು ಆರಿಸಿಕೊಳ್ಳಬೇಕು ಎಂದೂ ಮುರುಳಿಧರನ್ ಸಲಹೆ ನೀಡಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಪಕ್ಷಗಳ ನಾಯಕರನ್ನು ಶಶಿ ತರೂರ್ ಹೊಗಳುತ್ತಿದ್ದಾರಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಕಾಂಗ್ರೆಸ್ನ ಹಿರಿಯ ನಾಯಕ ಮುರಳಿಧರನ್ ಕಾಂಗ್ರೆಸ್ ನಾಯಕರನ್ನು ಹೊರತುಪಡಿಸಿ ಎಲ್ಲರನ್ನೂ ಹೊಗಳುತ್ತಾರೆ ಎಂದರು.