ಕನ್ನಡ ಕಡ್ಡಾಯ ನೀತಿ: ರಾಜ್ಯ ಸರಕಾರಕ್ಕೆ 3 ವಾರಗಳ ಡೆಡ್ ಲೈನ್ ಕೊಟ್ಟ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದ ಕನ್ನಡ ಕಡ್ಡಾಯ ನೀತಿ ಸಂಬಂಧ ಸರ್ಕಾರಕ್ಕೆ 3 ವಾರಗಳೊಳಗೆ ಸ್ಪಷ್ಟ ಆಕ್ಷೇಪಣೆ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಅರ್ಜಿ ಎರಡು ವರ್ಷಗಳ ಹಿಂದೆ ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು. ಆದರೆ ಈವರೆಗೂ ಸರ್ಕಾರ ಈ ಅರ್ಜಿಗೆ ಯಾವುದೇ ಆಕ್ಷೇಪಣೆ ಸಲ್ಲಿಸದೆ ವಿಳಂಬ ಮಾಡಿದೆ. ಇದರ ಬೆನ್ನಲ್ಲೇ ಶುಕ್ರವಾರ ಹೈಕೋರ್ಟ್‌ ದ್ವಿಸದಸ್ಯ ಪೀಠದ ಎದುರು ವಿಚಾರಣೆ ನಡೆಯಿತು.

CBSE ಮತ್ತು ICSE ಮಾನ್ಯತೆ ಪಡೆದ ಕೆಲ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಸರ್ಕಾರದ ನಿರ್ಧಾರವು ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆಯಾಗಿದೆ ಮತ್ತು ಇದರಿಂದ ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಉಂಟಾಗುತ್ತದೆ ಎಂಬುದು ಇವರ ವಾದವಾಗಿದೆ.

ಸರ್ಕಾರ ಎರಡು ವರ್ಷಗಳಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆದ್ದರಿಂದ ಮಧ್ಯಂತರ ಆದೇಶ ನೀಡಬೇಕೆಂದು ಮನವಿ ಮಾಡಿದರು.

ಈ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕಾಮೇಶ್ವರ ರಾವ್ ಹಾಗೂ ನ್ಯಾಯಮೂರ್ತಿ ಸಿಎಂ ಜೋಶಿ ಅವರ ದ್ವಿಸದಸ್ಯ ಪೀಠ, “ಸರ್ಕಾರ ಮುಂದಿನ ಮೂರು ವಾರಗಳಲ್ಲಿ ಅರ್ಜಿಗೆ ಸಂಬಂಧಿಸಿದಂತೆ ಸ್ಪಷ್ಟ ಆಕ್ಷೇಪಣೆ ಸಲ್ಲಿಸಬೇಕು. ಇಲ್ಲದಿದ್ದರೆ ಅರ್ಜಿದಾರರ ಮನವಿಯನ್ನು ಪರಿಗಣಿಸಿ ಮಧ್ಯಂತರ ಆದೇಶ ನೀಡಲಾಗುತ್ತದೆ” ಎಂದು ಮೌಖಿಕ ಎಚ್ಚರಿಕೆ ನೀಡಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!