ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೇಮ್ಸ್ ಗನ್ ನಿರ್ದೇಶನದ ಬಹುನಿರೀಕ್ಷಿತ ಸೂಪರ್‌ಮ್ಯಾನ್ ಚಿತ್ರವು ಜುಲೈ 11ರಂದು ವಿಶ್ವಾದ್ಯಂತ ಬಿಡುಗಡೆಯಾಗಿ, ಭಾರತೀಯ ಸಿನಿಪ್ರಿಯರಿಗೂ ಅದೇ ದಿನ ಪ್ರಥಮ ಪ್ರದರ್ಶನ ಲಭ್ಯವಾಯಿತು. ಡೇವಿಡ್ ಕೊರೆನ್ಸ್‌ವೆಟ್ ಕ್ಲಾರ್ಕ್ ಕೆಂಟ್ ಪಾತ್ರದಲ್ಲಿ, ರಾಚೆಲ್ ಬ್ರಾಸ್ನಹನ್ ಲೋಯಿಸ್ ಲೇನ್ ಪಾತ್ರದಲ್ಲಿ ಕಾಣಿಸಿಕೊಂಡ ಈ ಚಿತ್ರದಲ್ಲಿ ನಿಕೋಲಸ್ ಹೌಲ್ಟ್, ಮಿಲ್ಲಿ ಆಲ್ಕಾಕ್, ಎಡಿಗಥೆಗಿ, ಆಂಥೋನಿ ಕ್ಯಾರಿಗನ್ ಮತ್ತು ನಾಥನ್ ಫಿಲಿಯನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಭಾರತದಲ್ಲಿ ಬಿಡುಗಡೆಗೊಂಡ ಆವೃತ್ತಿಗೆ ಕಟಿಂಗ್ ಶಾಕ್
ಭಾರತೀಯ ಚಿತ್ರ ಪ್ರಮಾಣ ಪತ್ರ ಮಂಡಳಿ (CBFC) ಈ ಹೊಸ ಸೂಪರ್‌ಮ್ಯಾನ್ ಚಲನಚಿತ್ರದಲ್ಲಿ ಹಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದು, ಕೆಲವೊಂದು ಸೀನ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ವಿಶೇಷವಾಗಿ, 33 ಸೆಕೆಂಡ್‌ಗಳ ಕಾಲ ಇದ್ದ ಡೇವಿಡ್ ಮತ್ತು ರಾಚೆಲ್ ನಡುವಿನ ಕಿಸ್ಸಿಂಗ್ ಸೀನ್ ಸಂಪೂರ್ಣವಾಗಿ ಕಟ್ ಮಾಡಲಾಗಿದೆ.ವರದಿಯ ಪ್ರಕಾರ, ಚಿತ್ರದಲ್ಲಿರುವ ಪ್ರತಿಯೊಂದು ಅಸಭ್ಯ ಪದವನ್ನೂ ತೆಗೆದು ಹಾಕುವಂತೆ ಸ್ಟುಡಿಯೋಗೆ ಸೂಚನೆ ನೀಡಲಾಗಿತ್ತು.
ಚಿತ್ರದ ಗ್ರಾಮ್ಯ ಸನ್ನಿವೇಶವೊಂದರ ಎಂಟು ಸೆಕೆಂಡ್‌ಗಳ ಶಾಟ್ ಅನ್ನು ಎರಡು ಸೆಕೆಂಡ್‌ಗಳ ಹೊಸ ದೃಶ್ಯದಿಂದ ಬದಲಾಯಿಸಲಾಗಿದೆ. ಹಾಗೆಯೇ ಪ್ರಮುಖ ಪಾತ್ರಗಳ ನಡುವಿನ ಕೆಲವು ದ್ವಂದ್ವ ಮತ್ತು ಲವ್ ಸೀನ್‌ಗಳು ಸಹ ಬದ್ಲಾವಣೆಗೊಂಡಿವೆ. ಇದರಿಂದಾಗಿ, ಕೆಲವು ಪ್ರೇಕ್ಷಕರು ಚಿತ್ರದಲ್ಲಿ ಏನಾದರೂ ಕಳೆದುಹೋಯಿತೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಜುಲೈ 9 ರಂದು ನಡೆದ ಪ್ರಥಮ ಪ್ರದರ್ಶನದ ವೇಳೆ, ಹಾಜರಿದ್ದ ಪ್ರೇಕ್ಷಕರು ಸೆನ್ಸಾರ್ ಮಾಡಿದ ದೃಶ್ಯಗಳ ಕೊರತೆಯನ್ನು ತಕ್ಷಣವೇ ಗುರುತಿಸಿದ್ದರು. “ಒಂದೇ ದೃಶ್ಯದ ಒಂದು ಭಾಗವನ್ನು ಉಳಿಸಿಕೊಂಡು, ಮತ್ತೊಂದು ಭಾಗವನ್ನು ತೆಗೆಯಲಾಗಿದೆ – ಈ ಅಸಮತೋಲನ ಪ್ರೇಕ್ಷಕರಿಗೆ ಗೊಂದಲ ಉಂಟುಮಾಡಿದೆ,” ಎಂದು ಅಭಿಮಾನಿಗಳು ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದಾರೆ.
ಈ ಎಲ್ಲ ಬದಲಾವಣೆಗಳ ನಂತರ, ಚಿತ್ರಕ್ಕೆ ಸಿಬಿಎಫ್‌ಸಿ ಯು/ಎ 13+ ಪ್ರಮಾಣಪತ್ರ ನೀಡಿದೆ. ಪ್ರಮಾಣಪತ್ರದಲ್ಲಿ ಉಲ್ಲೇಖಿಸಿರುವಂತೆ, ಬಿಡುಗಡೆಗೊಂಡ ಆವೃತ್ತಿಯ ಅವಧಿ 2 ಗಂಟೆ 10 ನಿಮಿಷ 44 ಸೆಕೆಂಡುಗಳಾಗಿದ್ದು, ಕಟಿಂಗ್ ಪರಿಣಾಮವಾಗಿ ಮೂಲದ ಚರಿತ್ರಾತ್ಮಕ ಅನುಭವದಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸ ಕಾಣಿಸಿಕೊಳ್ಳುತ್ತಿದೆ.