ಮಾತೃಭಾಷೆ ತಾಯಿಯಂತೆ, ಹಿಂದಿ ನಮಗೆ ಅಜ್ಜಿಯಂತೆ: ಹೀಗ್ಯಾಕಂದ್ರು ಡಿಸಿಎಂ ಪವನ್ ಕಲ್ಯಾಣ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಹೈದರಾಬಾದ್‌ನ ಗಚ್ಚಿಬೌಲಿಯ ಜಿಎಂಸಿ ಬಾಲಯೋಗಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಭಾಷಾ ಇಲಾಖೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಷೆಯ ಪ್ರಸ್ತುತಿಯ ಕುರಿತು ಪ್ರಮುಖ ಭಾಷಣ ನೀಡಿದರು. ಶಿಕ್ಷಣ, ಉದ್ಯೋಗ ಮತ್ತು ವೈವಾಹಿಕ ಕ್ಷೇತ್ರಗಳಲ್ಲಿ ಹಿಂದಿಯ ಪ್ರಾಮುಖ್ಯತೆಯನ್ನು ಸ್ಪಷ್ಟಪಡಿಸಿದ ಅವರು, ಹಿಂದಿ ಭಾಷೆಯ ವಿರೋಧ ಕೇವಲ ಸಂಕುಚಿತ ಮನೋಭಾವನೆಯ ಪ್ರತೀಕವಾಗಿದೆ ಎಂದು ಎಚ್ಚರಿಸಿದರು.

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ತಮಿಳಿಗರಾಗಿದ್ದರೂ ಹಿಂದಿಯನ್ನ ಪ್ರೀತಿಸುತ್ತಿದ್ದರು ಎಂಬ ಉದಾಹರಣೆಯನ್ನು ಕೊಟ್ಟ ಪವನ್ ಕಲ್ಯಾಣ್, ನಾವು ಇಂಗ್ಲಿಷ್ ಆರಾಮವಾಗಿ ಮಾತನಾಡುತ್ತೇವೆ, ಆದರೆ ಹಿಂದಿ ಮಾತನಾಡಲು ಏಕೆ ಹಿಂಜರಿಯುತ್ತೇವೆ? ಎಂದು ಪ್ರಶ್ನಿಸಿದರು. ಮಾತೃಭಾಷೆ ತಾಯಿಯಂತೆ ಹಿಂದಿ ನಮಗೆ ಅಜ್ಜಿಯಂತೆ ಗೌರವಿಸಲು ಕರೆ ನೀಡಿದ ಅವರು, ಹೊಸ ಭಾಷೆಯನ್ನು ಕಲಿಯುವುದರಿಂದ ನಮ್ಮ identity ನಾಶವಾಗುವುದಿಲ್ಲ, ಬದಲಿಗೆ ನಮ್ಮ ಪ್ರಗತಿಯ ಹಾದಿಯನ್ನು ವಿಸ್ತಾರಗೊಳಿಸುತ್ತದೆ ಎಂದರು.

ಹಿಂದಿಯನ್ನು ರಾಜಕೀಯ ಕಾರಣಗಳಿಗೆ ಬಳಸಿ ಅದನ್ನು ತಿರಸ್ಕರಿಸುವುದು ಭವಿಷ್ಯದ ಅವಕಾಶಗಳನ್ನು ಕಳೆದುಕೊಳ್ಳುವಂತಾಗುತ್ತದೆ ಎಂದು ಪವನ್ ಕಲ್ಯಾಣ್ ಅಭಿಪ್ರಾಯಪಟ್ಟರು. ಸರ್ಕಾರದ ಶಾಲೆಗಳಲ್ಲಿ ಹಿಂದಿಯನ್ನು ಐಚ್ಛಿಕವಾಗಿ ಕಲಿಸುವ ಯೋಜನೆಗೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ ಅವರು, ಹಿಂದಿ ಶಿಕ್ಷಕರಿಗೆ ತರಬೇತಿ ನೀಡುವ ಕ್ರಮದಿಂದ ಯುವ ಸಮುದಾಯ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪವನ್ ಕಲ್ಯಾಣ್, ಭಾಷೆಯನ್ನು ವಿಭಜನೆಗಲ್ಲ, ಬದಲಾಗಿ ದೇಶದ ಏಕತೆಗೆ ಸೇತುವೆಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಂಸ್ಕೃತಿಯ ಹೆಮ್ಮೆಯ ಜೊತೆಗೆ ಎಲ್ಲ ಭಾಷೆಗಳಿಗೂ ಅಗತ್ಯ ಗೌರವ ಸಿಗಬೇಕು ಎಂಬ ನಿಲುವನ್ನು ಪ್ರತಿಪಾದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!