ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನದಾಟ ಟೀಮ್ ಇಂಡಿಯಾ ಪೆರ್ಫಾರ್ಮೆನ್ಸ್‌ಗೆ ಮಾತ್ರವಲ್ಲ, ಡ್ಯೂಕ್ಸ್ ಚೆಂಡಿನ ಗುಣಮಟ್ಟಕ್ಕೂ ತೀವ್ರ ಚರ್ಚೆ ಸೃಷ್ಟಿಸಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ಗೆ ಆಲೌಟ್ ಆದ ಬಳಿಕ, ಭಾರತ ತಂಡ 3 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ದಿನದಾಟ ಮುಗಿಸಿದೆ.
ಆದರೆ, ಈ ದಿನದಾಟದ ಪ್ರಮುಖ ಘಟ್ಟವಾಗಿ ಡ್ಯೂಕ್ಸ್ ಚೆಂಡಿನ ಸ್ಥಿತಿಗತಿ ಪ್ರಶ್ನೆಗೆ ಒಳಗಾಯಿತು. ಭಾರತ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಚೆಂಡು ಎರಡು ಬಾರಿ ಬದಲಾಯಿಸಲಾಯಿತು. ನಾಯಕ ಶುಭ್‌ಮನ್ ಗಿಲ್ ಈ ಸಂದರ್ಭದಲ್ಲಿ ಅಂಪೈರ್‌ಗಳೊಂದಿಗೆ ಜಗಳಕ್ಕಿಳಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂದ್ಯದ ಅಂತ್ಯದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಜಸ್ಪ್ರೀತ್ ಬುಮ್ರಾ ಮಾತು ಹೆಚ್ಚು ಗಮನ ಸೆಳೆಯಿತು. ಡ್ಯೂಕ್ಸ್ ಚೆಂಡಿನ ಗುಣಮಟ್ಟದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾನು ಯಾವುದೇ ವಿವಾದಾತ್ಮಕ ಹೇಳಿಕೆ ನೀಡಲು ಇಚ್ಛಿಸುವುದಿಲ್ಲ. ನನ್ನ ಮೇಲೆ ನಿಖರವಾದ ನಿಯಂತ್ರಣ ಇಲ್ಲದ ವಿಷಯಗಳ ಬಗ್ಗೆ ಮಾತನಾಡುವುದು ಬೇಡ. ನಾನು ಕಷ್ಟಪಟ್ಟು ಬೌಲಿಂಗ್ ಮಾಡುತ್ತೇನೆ. ಕೆಲವೊಮ್ಮೆ ಚೆಂಡು ನಿಮ್ಮ ಪರವಾಗಿರಬಹುದು, ಕೆಲವೊಮ್ಮೆ ಇಲ್ಲದಿರಬಹುದು,” ಎಂದು ಸಮತೋಲಿತ ಹೇಳಿಕೆ ನೀಡಿದರು.
ಲಾರ್ಡ್ಸ್ ಟೆಸ್ಟ್‌ನಲ್ಲಿ 74 ರನ್ ನೀಡಿ ಐದು ವಿಕೆಟ್ ಕಬಳಿಸಿದ ಬುಮ್ರಾ, ಈ ಮೈದಾನದಲ್ಲಿ ಐದು ವಿಕೆಟ್ ಪಡೆದ ಮೊದಲ ಪಂದ್ಯವೆಂದು ಗುರುತಿಸಿಕೊಂಡರು. ಆದರೆ ತನ್ನ ಸಾಧನೆಗೆ ವಿಶೇಷ ಸೆಲೆಬ್ರೇಶನ್ ಇಲ್ಲದಿದ್ದದರ ಹಿಂದಿನ ಕಾರಣವನ್ನೂ ಸ್ಪಷ್ಟಪಡಿಸಿದರು. “ನಾನು ಬಹಳ ದಣಿದಿದ್ದೆ. 21-22 ವರ್ಷದವನು ಅಲ್ಲ. ನಾನಾದಷ್ಟು ಧೈರ್ಯದಿಂದಲೇ ಬೌಲಿಂಗ್ ಮಾಡಿರುವುದಕ್ಕೆ ತೃಪ್ತಿಯಿದೆ,” ಎಂದರು.
ಭಾರತದ ನಾಯಕ ಶುಭ್‌ಮನ್ ಗಿಲ್, ದಿನದಾಟದ ವೇಳೆಯಲ್ಲಿ ಅಂಪೈರ್‌ಗಳಿಗೆ ಡ್ಯೂಕ್ಸ್ ಚೆಂಡಿನ ಸ್ಥಿತಿ ಕುರಿತು ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು. ಎರಡನೇ ಬಾರಿಯ ಚೆಂಡು ಬದಲಾವಣೆಯ ನಂತರ ಸ್ಪಿನ್ನರ್‌ಗಳಿಗೆ ಸಹಾಯವಾಗದ ಕಾರಣವಾಗಿ ಗಿಲ್ ಅಸಮಾಧಾನಗೊಂಡರು ಎನ್ನಲಾಗಿದೆ.