ಗಾಳಿ ಆಂಜನೇಯ ದೇವಾಲಯ ಮುಜರಾಯಿ ಇಲಾಖೆ ಸುಪರ್ದಿಗೆ: ಸರ್ಕಾರದ ನಿರ್ಧಾರಕ್ಕೆ ಭಕ್ತರಿಂದ ವಿರೋಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ರಾಜಧಾನಿಯ ಬೃಹತ್ ಶ್ರದ್ಧಾ ಕೇಂದ್ರಗಳಲ್ಲಿ ಒಂದಾದ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಇದೀಗ ಭಾರೀ ವಿವಾದದ ನಡುವೆಯಿದೆ. ಮುಜರಾಯಿ ಇಲಾಖೆ ಈ ಪ್ರಸಿದ್ಧ ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಸರ್ಕಾರದ ಈ ನಿರ್ಧಾರಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಾವಿರಾರು ಭಕ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ದೇಗುಲದ ಮುಂದೆ ಭಕ್ತರ ಬೃಹತ್ ಪ್ರತಿಭಟನೆ
ದೇವಾಲಯದ ಮುಂಭಾಗದಲ್ಲಿ ಶುಕ್ರವಾರ ಸಾವಿರಕ್ಕೂ ಹೆಚ್ಚು ಭಕ್ತರು ಜಮಾಯಿಸಿ ಭಾರೀ ಪ್ರತಿಭಟನೆಯನ್ನು ನಡೆಸಿದರು. ದೇವಸ್ಥಾನವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಹೊರಟಿರುವ ಕ್ರಮ ಹಿಂದೆಯೂ ಭಕ್ತರಲ್ಲಿ ಆಕ್ರೋಶ ಉಂಟುಮಾಡಿದ್ದು, ಈ ಬಾರಿ ಭಕ್ತರಲ್ಲಿ ಪ್ರತಿರೋಧ ತೀವ್ರವಾಗಿ ಬೆಳೆಯುತ್ತಿದೆ. ದೇವಾಲಯದ ಟ್ರಸ್ಟ್ ಅಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರೂ ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ಕ್ರಮವನ್ನು ಪ್ರಶ್ನಿಸಿದರು.

ಟ್ರಸ್ಟ್ ವತಿಯಿಂದ ನೀಡಲಾದ ಮಾಹಿತಿಯಂತೆ, ದೇವಸ್ಥಾನದ ಶ್ರೇಯೋಭಿವೃದ್ಧಿ ಸಹಿಸಲಾರದವರು ಹುಂಡಿ ಕಳವು ಪ್ರಕರಣದ ಹೆಸರಿನಲ್ಲಿ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸರ್ಕಾರದ ಈ ನಿರ್ಧಾರ ಹಿಂದಿರುವ ಉದ್ದೇಶ ದೇವಾಲಯದ ಆಡಳಿತವನ್ನು ತಮ್ಮ ಹಸ್ತಗತ ಮಾಡಿಕೊಳ್ಳಲು ನಡೆಸಿದ ರಾಜಕೀಯ ಕಸರತ್ತು ಎಂದು ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋ ಬೆನ್ನಲ್ಲೇ ಸರ್ಕಾರದ ನಿರ್ಧಾರ
ಹುಂಡಿ ಹಣ ಎಣಿಕೆ ವೇಳೆ ದೇವಸ್ಥಾನದ ಕೆಲ ಸಿಬ್ಬಂದಿಗಳು ಕಳ್ಳತನ ಮಾಡುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ವಿಡಿಯೋ ಬಳಿಕ ದೇವಸ್ಥಾನದ ಆಂತರಿಕ ಆಡಳಿತದ ಮೇಲೆ ಪ್ರಶ್ನೆ ಎದ್ದಿದ್ದು, ಅದನ್ನೇ ಆಧಾರವನ್ನಾಗಿಸಿಕೊಂಡು ಮುಜರಾಯಿ ಇಲಾಖೆ ದಿಢೀರ್ ನಿರ್ಧಾರ ತೆಗೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!