ಹೊಸದಿಗಂತ ವರದಿ ಗೋಕರ್ಣ:
ಪುಣ್ಯ ಕ್ಷೇತ್ರ ಗೋಕರ್ಣದ ರಾಮತೀರ್ಥ ಬಳಿಯ ಅರಣ್ಯ ಪ್ರದೇಶದ ಗುಹೆಯೊಂದರಲ್ಲಿ ವಾಸವಾಗಿದ್ದ ರಷ್ಯಾದ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಗೋಕರ್ಣ ಪೊಲೀಸರು ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದು ರಷ್ಯಾದ ರಾಯಭಾರ ಕಛೇರಿಯನ್ನು ಸಂಪರ್ಕಿಸಿ ಮುಂದಿನ ಕ್ರಮಗಳಿಗೆ ಪ್ರಯತ್ನಗಳು ಸಾಗಿವೆ.
ರಷ್ಯಾದ ನಿನಾ ಕುಟಿನಾ(40) ಹಾಗೂ ಆಕೆಯ ಇಬ್ಬರು ಹೆಣ್ಣು ಮಕ್ಕಳು ಪ್ರೆಮಾ (07) ಮತ್ತು ಅಮಾ(04) ರಾಮತೀರ್ಥ ಬಳಿಯ ಅರಣ್ಯ ಪ್ರದೇಶದ ಗುಹೆಯೊಂದರಲ್ಲಿ ವಾಸವಾಗಿದ್ದರು ಎನ್ನಲಾಗಿದ್ದು ಗೋಕರ್ಣ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಗುಹೆಯಲ್ಲಿ ಯಾರೋ ಇರುವಂತೆ ಕಂಡು ಬಂದ ಕಾರಣ ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ಗುಹೆಯಲ್ಲಿ ಮಹಿಳೆ ಮತ್ತು ಮಕ್ಕಳು ವಾಸವಾಗಿದ್ದು ಗಮನಕ್ಕೆ ಬಂದಿದೆ.
ಗುಹೆಯ ಸುತ್ತ ಮುತ್ತಲಿನ ಭಾಗಗಳಲ್ಲಿ ಮಣ್ಣು ಕುಸಿಯುವ ಮತ್ತು ವಿಷ ಜಂತುಗಳಿಂದ ಅವರಿಗೆ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಜಿಲ್ಲಾ ಪೊಲೀಸ್ ವರಿಷ್ಠ ಎಂ ನಾರಾಯಣ ಅವರ ಮಾರ್ಗದರ್ಶನದಲ್ಲಿ ಗೋಕರ್ಣ ಪೊಲೀಸ್ ನಿರೀಕ್ಷಕ ಶ್ರೀಧರ್ ಮತ್ತು ಸಿಬ್ಬಂದಿಗಳು ಮಹಿಳೆಯ ಮನವೊಲಿಸಿ ಆಕೆ ಮತ್ತು ಮಕ್ಕಳನ್ನು ಅಲ್ಲಿಂದ ಸ್ಥಳಾಂತರಿಸಿ ಕೆಳಗೆ ಕರೆ ತಂದಿದ್ದಾರೆ.
ಮಹಿಳೆಯ ಇಚ್ಛೆಯಂತೆ ಬಂಕಿಕೊಡ್ಲದ ಬಳಿ ಇರುವ ಶಂಕರ ಪ್ರಸಾದ ಫೌಂಡೇಶನ್ ಗೆ ಸಂಬಂಧಿಸಿದ ಮಹಿಳಾ ಯೋಗಿ ಯೋಗರತ್ನ ಸರಸ್ವತಿ ಸ್ವಾಮೀಜಿ ಅವರ ಆಶ್ರಮಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿಗಳ ರಕ್ಷಣೆಯಲ್ಲಿ ಕಳುಹಿಸಿದ್ದು ರಷ್ಯಾದಿಂದ ಭಾರತಕ್ಕೆ ಆಗಮಿಸಿದ ಮಹಿಳೆ ಆಧ್ಯಾತ್ಮದತ್ತ ಹೆಚ್ಚಿನ ಒಲವು ಹೊಂದಿದ್ದು ಗುಹೆಯಲ್ಲಿ ವಾಸವಾಗಿ ಧ್ಯಾನ, ಪೂಜಾ ಕಾರ್ಯಗಳನ್ನು ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಮಹಿಳೆ ಪಾಸ್ ಪೋರ್ಟ್, ವಿಸಾ ಕುರಿತು ವಿಚಾರಣೆ ನಡೆಸಿದಾಗ ಮಾಹಿತಿ ನೀಡದ ಕಾರಣ ಮಹಿಳಾ ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಸ್ವಾಮೀಜಿ ಮೂಲಕ ಆಪ್ತ ಸಮಾಲೋಚನೆ ನಡೆಸಿದ ನಂತರ ಗುಹೆಯ ಸುತ್ತ ಮುತ್ತ ಶೋಧಿಸಿದಾಗ ಪಾಸ್ ಪೋರ್ಟ್ ಮತ್ತು ವಿಸಾ ಪತ್ತೆಯಾಗಿದ್ದು 2017 ರ ಏಪ್ರಿಲ್ 17ಕ್ಕೆ ವಿಸಾ ಅವಧಿ ಮುಕ್ತಾಯಗೊಂಡಿರುವುದು ತಿಳಿದು ಬಂದಿದೆ.
ಮಹಿಳೆ ಮತ್ತು ಮಕ್ಕಳನ್ನು ಸುರಕ್ಷತಾ ದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ವೀಕಾರ ಕೇಂದ್ರದಲ್ಲಿ ಇರಿಸಲಾಗಿದ್ದು ಬೆಂಗಳೂರಿನಲ್ಲಿರುವ ರಷ್ಯಾದ ರಾಯಭಾರ ಕಚೇರಿಗೆ ಸಂಪರ್ಕ ನಡೆಸಿ ಮಹಿಳೆ ಮತ್ತು ಮಕ್ಕಳನ್ನು ರಷ್ಯಾಕ್ಕೆ ಕಳುಹಿಸಿ ಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.