ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಲ್ಫಿ ತೆಗೆಯುವ ನೆಪದಲ್ಲಿ ಪತ್ನಿ ಗಂಡನನ್ನೇ ನದಿಗೆ ತಳ್ಳಿದ ಘಟನೆ ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಮ್ ಬ್ಯಾರೇಜ್ ಬಳಿ ನಡೆದಿದೆ. ಕೃಷ್ಣಾ ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ.
ಶಕ್ತಿನಗರ ಮೂಲದ ಯುವಕನೊಬ್ಬ, ಪತ್ನಿಯೊಂದಿಗೆ ತೆರಳಿದ್ದ ವೇಳೆ, ಅವಳು ಮೊದಲು ಸೆಲ್ಫಿ ತೆಗೆದುಕೊಂಡು ಬಳಿಕ ಗಂಡನನ್ನು ಬ್ರಿಡ್ಜ್ ತುದಿಗೆ ನಿಲ್ಲಿಸಿ ನದಿಗೆ ತಳ್ಳಿದ್ದಾಳೆ ಎನ್ನಲಾಗಿದೆ. ಪರಿಣಾಮ ಯುವಕ ನೀರಿನಲ್ಲಿ ಸ್ವಲ್ಪ ದೂರ ಕೊಚ್ಚಿಕೊಂಡು ಹೋಗಿದ್ದಾನೆ.
‘ಕಾಪಾಡಿ ಬ್ರೋ’ ಎಂದು ಜೋರಾಗಿ ಕಿರುಚಿದ ಗಂಡ
ನದಿಯ ಪ್ರವಾಹದಲ್ಲಿ ಕೆಲ ದೂರ ಸಾಗಿದ ಯುವಕ, ಬಂಡೆಯೊಂದರ ಮೇಲೆ ನಿಂತು “ಕಾಪಾಡಿ ಬ್ರೋ… ಅವಳನ್ನ ಹಿಡಿರಿ ಬ್ರೋ… ಯಾರಿಗಾದ್ರೂ ಫೋನ್ ಮಾಡಿ ಬ್ರೋ…” ಎಂದು ಮೊರೆ ಹೋದ ವಿಡಿಯೋವೂ ವೈರಲ್ ಆಗಿದೆ. ಈ ಕಿರುಚಾಟ ಸ್ಥಳೀಯರ ಗಮನಸೆಳೆದಿದ್ದು, ತಕ್ಷಣ ನೆರವಿಗೆ ಧಾವಿಸಿದ್ದಾರೆ.
ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಹಾಗೂ ಬ್ರಿಡ್ಜ್ ಕಂ ಬ್ಯಾರೇಜ್ ಮಾರ್ಗವಾಗಿ ಹೊರಟಿದ್ದ ಬುಲೆರೋ ವಾಹನ ಸವಾರರು, ಕೆಬಿಜೆಎನ್‌ಎಲ್ ಸಿಬ್ಬಂದಿಗಳು ಸೇರಿ ಸುಮಾರು ಎರಡು ಗಂಟೆಗಳ ಕಾರ್ಯಾಚರಣೆಯ ನಂತರ ಯುವಕನನ್ನು ಸುರಕ್ಷಿತವಾಗಿ ನದಿಯಿಂದ ಹೊರತೆಗೆದರು.
ಅವಳೇ ತಳ್ಳಿದಳು, ಅಲ್ಲ ಇಲ್ಲ ಎಂದ ಮಹಿಳೆ
ಪತಿ, ಪತ್ನಿಯೇ ತಳ್ಳಿದಳು ಎಂದು ಆರೋಪಿಸಿದರೆ, ಪತ್ನಿಯು ಪತಿಯೇ ಕಾಲು ಜಾರಿ ಬಿದ್ದಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಈ ಘಟನೆ ನಂತರ ಇಬ್ಬರೂ ಬೈಕ್‌ನಲ್ಲಿ ಸ್ಥಳದಿಂದ ತೆರಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಯಚೂರಿನಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಪೊಲೀಸರು ಇದುವರೆಗೆ ಯಾವುದೇ ಅಧಿಕೃತ ಪ್ರಕರಣ ದಾಖಲಿಸಿಲ್ಲ.