ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರಭಾವಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) – ಕೋಲ್ಕತ್ತಾ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಶುಕ್ರವಾರ ರಾತ್ರಿ ಈ ಹೀನ ಕೃತ್ಯ ನಡೆದಿದ್ದು, ಹರಿದೇವ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆಯ ದೂರಿನ ಪ್ರಕಾರ, ತನ್ನನ್ನು ಕೌನ್ಸೆಲಿಂಗ್ ಸೆಷನ್ಗಾಗಿ ಹಾಸ್ಟೆಲ್ಗೆ ಕರೆಸಲಾಗಿತ್ತು. ನಂತರ ಹಾಸ್ಟೆಲ್ನಲ್ಲಿ ಡ್ರಗ್ಸ್ ಬೆರೆಸಿದ ಪಾನೀಯ ಸೇವಿಸಿದ ನಂತರ ಪ್ರಜ್ಞಾಹೀನಳಾದೆ. ಪ್ರಜ್ಞೆ ಮರಳಿದ ನಂತರ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಅರಿವಾಗಿದೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾಳೆ.
ದೂರು ದಾಖಲಿಸಿಕೊಂಡ ಹರಿದೇವ್ಪುರ ಪೊಲೀಸರು ಆರೋಪಿಯನ್ನು ಶುಕ್ರವಾರ ರಾತ್ರಿ ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರೆದಿದೆ.